ಧಾರವಾಡದಲ್ಲಿ ಕಟ್ಟಡ ದುರಂತ: ಮೃತರ ಸಂಖ್ಯೆ 16ಕ್ಕೆ ಏರಿಕೆ

Update: 2019-03-23 12:48 GMT

ಬೆಂಗಳೂರು, ಮಾ.23: ಧಾರವಾಡದಲ್ಲಿನ ವಾಣಿಜ್ಯ ಸಂಕೀರ್ಣ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದ್ದು, ಅವಶೇಷಗಳಡಿ ಸಿಲುಕಿರುವ ಮತ್ತಷ್ಟು ಜನರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ.

8 ವರ್ಷದ ಬಾಲಕಿ ದಿವ್ಯಾ, ಉಣಕಲ್, ತಂದೆ ಮಹೇಶ್ವರಯ್ಯ ಹಿರೇಮಠ, ಮಗ ಆಶೀಶ್ ಹಿರೇಮಠ ಸೇರಿ ಸಾವನ್ನಪ್ಪಿದ್ದವರ ಸಂಖ್ಯೆ ನಾಲ್ಕನೇ ದಿನಕ್ಕೆ 16 ಕ್ಕೇರಿದ್ದು, ಕಟ್ಟಡದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ.

ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಭರದಿಂದ ನಡೆಸುತ್ತಿದೆ. ಅಗ್ನಿಶಾಮಕದ ಸಿಬ್ಬಂದಿ ಕಟ್ಟಡದ ತಳಮಟ್ಟದೊಳಗೆ ಹೋಗಲು ಸುರಂಗ ಕೊರೆದಿದ್ದು, ಇದರಿಂದ ಹಲವರ ಪ್ರಾಣ ರಕ್ಷಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈವರೆಗೆ 65ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದ್ದು, ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸಂಬಂಧಿಕರ ಆಕ್ರಂದನ

ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಇನ್ನೂ ಹಲವರು ಇದ್ದು ತಮ್ಮವರ ಸುರಕ್ಷಿತ ಬರುವಿಕೆಗೆ ಎದುರು ನೋಡುತ್ತಿದ್ದಾರೆ. ಸ್ಥಳದಲ್ಲಿರುವ ಅನೇಕರು ತಮ್ಮವರು ಕಾಣೆಯಾಗಿದ್ದಾರೆ. ಅವರನ್ನು ಹೇಗಾದರೂ ಮಾಡಿ ದಯವಿಟ್ಟು ಹುಡುಕಿಕೊಡಿ ಎಂದು ಕಣ್ಣೀರು ಹಾಕಿರುವ ದೃಶ್ಯ ಮನಕಲುಕುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News