ಸಕಲ ಸರಕಾರಿ ಗೌರವಗಳೊಂದಿಗೆ ಸಚಿವ ಸಿ.ಎಸ್.ಶಿವಳ್ಳಿ ಅಂತ್ಯ ಸಂಸ್ಕಾರ

Update: 2019-03-23 13:25 GMT

ಹುಬ್ಬಳ್ಳಿ, ಮಾ. 23: ಹೃದಯಾಘಾತದಿಂದ ನಿನ್ನೆ ನಿಧನರಾದ ಪೌರಾಡಳಿತ ಸಚಿವ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ(ಸಿ.ಎಸ್.ಶಿವಳ್ಳಿ)ಅವರ ಅಂತ್ಯಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹುಟ್ಟೂರು ಯರಗುಪ್ಪಿ ಗ್ರಾಮದಲ್ಲಿ ಶನಿವಾರ ನೆರವೇರಿಸಲಾಯಿತು.

ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ದೇಶಪಾಂಡೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಮುಖಂಡರ ಅಂತ್ಯ ಸಂಸ್ಕಾರದ ವೇಳೆ ಪಾಲ್ಗೊಂಡಿದ್ದರು.

ಬಂಧು-ಮಿತ್ರರು, ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ನೆಚ್ಚಿನ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದರು. ಸಿ.ಎಸ್.ಶಿವಳ್ಳಿ ಅವರ ಜನಪರ ಕಾಳಜಿ, ಸೇವೆ ಹಾಗೂ ಒಡನಾಟ ಸ್ಮರಿಸಿದ ಹಲವು ನಾಯಕರು ಗದ್ಗದಿತರಾಗಿ ಕಂಬನಿ ಮಿಡಿದರು.

ಶಿವಳ್ಳಿ ಅವರ ಜಮೀನಿನಲ್ಲಿ ಅವರ ತಂದೆ-ತಾಯಿಯ ಸಮಾಧಿ ಪಕ್ಕದಲ್ಲೆ ಕುರುಬ ಸಮುದಾಯದ ಹಾಲು ಮತದ ವಿಧಿ-ವಿಧಾನದ ಮೂಲಕ ಸಕಲ ಸರಕಾರಿ ಗೌರವಗಳೊಂದಿಗೆ ಶಿವಳ್ಳಿಯವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಧಾರವಾಡದ ವಿವಿಧ ಮಠಾಧೀಶರು ಹಾಜರಿದ್ದರು.

ಹರಿದು ಬಂದ ಜನ ಸಾಗರ: ಕುಂದಗೋಳದ ಜೆಎಸ್‌ಎಸ್ ವಿದ್ಯಾಪೀಠದಲ್ಲಿ ಶುಕ್ರವಾರ ರಾತ್ರಿಯಿಂದಲೇ ಸಾರ್ವಜನಿರ ದರ್ಶನಕ್ಕೆ ಶಿವಳ್ಳಿ ಅವರ ಪಾರ್ಥಿವ ಶರೀರ ಇಡಲಾಗಿತ್ತು. ಅಪಾರ ಪ್ರಮಾಣದ ಜನರು ಅಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ದುಃಖದಲ್ಲೆ ಪರೀಕ್ಷೆ ಬರೆದ ಪುತ್ರಿ

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ಎರಡನೆ ಪುತ್ರಿ ರೂಪಾ ಇಲ್ಲಿನ ಕೆಎಲ್‌ಇ ಶಾಲೆಯಲ್ಲಿ ಹತ್ತನೆ ತರಗತಿ ಓದುತ್ತಿದ್ದು, ಹುಬ್ಬಳ್ಳಿಯ ಸೈಂಟ್ ಆಂಥೋಣಿ ಶಾಲೆಯಲ್ಲಿಂದು ತಂದೆಯ ಸಾವಿನ ದುಃಖದಲ್ಲೆ ಎಸೆಸೆಲ್ಸಿ ಇಂಗ್ಲಿಷ್ ಪರೀಕ್ಷೆ ಬರೆದರು. ಆ ಬಳಿಕ ತಂದೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News