ತುಮಕೂರಿನಲ್ಲಿ ದೇವೇಗೌಡ ಸ್ಪರ್ಧೆ: ನಾನೂ ನಾಮಪತ್ರ ಸಲ್ಲಿಸುತ್ತೇನೆ ಎಂದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ

Update: 2019-03-23 14:42 GMT

ತುಮಕೂರು,ಮಾ.23: ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಪರ್ಧಿಸುವ ನಿರ್ಧಾರದ ಬೆನ್ನಲ್ಲೇ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ "ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ" ಎಂದು ಘೋಷಿಸಿದ್ದಾರೆ.

ತುಮಕೂರು ತಾಲೂಕು ಹೆಬ್ಬೂರಿನ ನಿವಾಸದಲ್ಲಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂಬ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದು, ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗುತ್ತಿದ್ದಂತೆ ಅಸಮಾಧಾನಗೊಂಡಿದ್ದ ಮುದ್ದಹನುಮೇಗೌಡರ ಬಂಡಾಯ ಮೈತ್ರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ ಕ್ಷೇತ್ರವನ್ನು ಮೈತ್ರಿ ಸೂತ್ರದಂತೆ ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದರಿಂದ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಬಿ-ಫಾರಂ ದೊರೆಯುವ ಸಾಧ್ಯತೆ ಇಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಹಾಲಿ ಸಂಸದರಿದ್ದರೂ ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ಬಗ್ಗೆ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ಸ್ವತಃ ಮುದ್ದಹನುಮೇಗೌಡ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಯಾವುದೇ ನಿರ್ಧಾರ ಮೈತ್ರಿ ನಾಯಕರಿಂದ ಪ್ರಕಟವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಮುದ್ದಹನುಮೇಗೌಡರು ಅಭಿಪ್ರಾಯ ಸಂಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮುದ್ದಹನುಮೇಗೌಡರು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಿರ್ಧಾರವನ್ನು ಪುನರ್ ಪರಿಶೀಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು, "ಸೋಮವಾರ ತುಮಕೂರಿನ ಬಿಜಿಎಸ್ ವೃತ್ತದಿಂದ ಮೆರವಣಿಗೆ ಹೊರಟು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುತ್ತೇನೆ" ಎಂದು ಘೋಷಿಸಿದರು.

'ಜಿಲ್ಲೆಯ ಕಾಂಗ್ರೆಸ್ ನಾಯಕರ ಮನದಾಳದ ನಿರ್ಧಾರವನ್ನು ಅರ್ಥ ಮಾಡಿಕೊಂಡು ಮೈತ್ರಿ ನಾಯಕರು ಕ್ಷೇತ್ರ ಹಂಚಿಕೆ ಬಗ್ಗೆ ಪುನರ್ ಪರಿಶೀಲನೆ ಮಾಡಲಿದ್ದಾರೆ. ಒಂದು ವೇಳೆ ಪುನರ್ ಪರಿಶೀಲನೆ ಮಾಡದಿದ್ದರೆ ಮುಂದಿನ ತಮ್ಮ ನಿರ್ಧಾರವನ್ನು ಸೋಮವಾರ ಪ್ರಕಟಿಸುತ್ತೇನೆ' ಎಂದು ತಿಳಿಸಿದ್ದಾರೆ. 

ಬೆಂಬಲಿಗರ ಸಭೆಗೆ ಆಗಮಿಸಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಮುದ್ದಹನುಮೇಗೌಡ ತೆಗೆದುಕೊಂಡಿರುವ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಲೋಕಸಭೆ ಚುನಾವಣೆಯ ನಂತರ ಮೈತ್ರಿ ಸರ್ಕಾರ ಇರುವುದಿಲ್ಲ ಎನ್ನುವ ಮಾತನ್ನು ಪುನರುಚ್ಚರಿಸಿದ್ದು, ಯಾವುದೇ ಕಾರಣಕ್ಕೂ ಮೈತ್ರಿ ಅಭ್ಯರ್ಥಿಯ ಪರ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‍ನ ಬಹುತೇಕ ನಾಯಕರು ಬೆಂಬಲಿಗರ ಸಭೆಯಲ್ಲಿ ಹಾಜರಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ.

ಸೋಮವಾರ ಹೆಚ್‍ಡಿಡಿ ನಾಮಪತ್ರ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಸೋಮವಾರ ಮಧ್ಯಾಹ್ನ 2.10 ರಿಂದ 2.30ರ ಸಮಯದೊಳಗೆ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲ್ಲಿದ್ದಾರೆ.

ಈ ವಿಷಯ ಖಚಿತಪಡಿಸಿದ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಎಚ್.ಡಿ.ದೇವೇಗೌಡರು ಹಾಸನದಿಂದ ಹೆಲಿಕಾಪ್ಟರ್ ಮುಖಾಂತರ ಮಂಡ್ಯಗೆ ತೆರಳಿ ನಿಖಿಲ್ ಅವರ ನಾಮಪತ್ರ ಸಲ್ಲಿಸಿ ಅಲ್ಲಿಂದ ತುಮಕೂರಿಗೆ ಮಧ್ಯಾಹ್ನ 12.00 ಗಂಟೆಗೆ ಆಗಮಿಸಿ, ಬಿ.ಜಿ.ಎಸ್.ವೃತ್ತದಿಂದ ಮೆರವಣಿಗೆ ಮೂಲಕ  ಜಿಲ್ಲಾಧಿಕಾರಿ ಕಚೇರಿ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ಬಿಜಿಎಸ್ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. 
ದೇವೇಗೌಡರು ಭಾನುವಾರ ಬೆಳಗ್ಗೆ 11 ಗಂಟೆಗೆ ಶ್ರೀ ಸಿದ್ಧಗಂಗಾ ಕ್ಷೇತ್ರಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ನಂತರ ಆದಿ ಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಇಬ್ಬರು ಸ್ವಾಮೀಜಿಗಳ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಮೈತ್ರಿ ಪಕ್ಷದಲ್ಲಿ ಆದ ತೀರ್ಮಾನದಂತೆ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ. ನಾವ್ಯಾರೂ ಕೇಳಿರಲಿಲ್ಲ. ಈ ಹಿಂದೆ ಆದ ತೀರ್ಮಾನದ ಪ್ರಕಾರವೇ ಜೆಡಿಎಸ್ ವತಿಯಿಂದ ಇಲ್ಲಿ ಸ್ಪರ್ಧೆ ನಡೆಯುತ್ತಿದೆ. ದೇವೇಗೌಡರೇ ಇಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News