ರಾಜ್ಯದಲ್ಲಿ 4.03 ಲಕ್ಷ ಅಂಗವಿಕಲ ಮತದಾರರ ನೋಂದಣಿ

Update: 2019-03-23 17:23 GMT

ಬೆಂಗಳೂರು, ಮಾ.23: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 4,03,907 ಅಂಗವಿಕಲ ಮತದಾರರು ಹೆಸರು ನೋಂದಾಯಿಸಿದ್ದಾರೆ. ಇಂತಹ ಮತದಾರರಿಗೆ ಅನುಕೂಲವಾಗಲು ಆಯ್ದ ಮತಗಟ್ಟೆಗಳನ್ನು ನೆಲಮಹಡಿಯಲ್ಲೇ ಸ್ಥಾಪಿಸಲಾಗುತ್ತಿದೆ.

ಅಂಗವಿಕಲ ಮತದಾರರಿಗೆ ಈ ಬಾರಿ ಆಯೋಗ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ರಾಜ್ಯದ 33 ಚುನಾವಣಾ ಜಿಲ್ಲೆಗಳು ಹಾಗೂ 28 ಲೋಕಸಭಾ ಕ್ಷೇತ್ರಗಳ 35,739 ಮತಗಟ್ಟೆಗಳಲ್ಲಿ ಇಲ್ಲಿಯವರೆಗೆ 4.04 ಲಕ್ಷ ಅಂಗವಿಕಲ ಮತದಾರರನ್ನು ಗುರುತಿಸಿದೆ. ಅವರ ನೆರವಿಗೆ 35,739 ಗಾಲಿ ಕುರ್ಚಿಗಳು, 41,669 ಭೂತಗನ್ನಡಿಗಳು, 2,213 ಸಂಜ್ಞಾ ಭಾಷೆ ವಿವರಣೆಗಾರರು ಮತ್ತು 31,515 ಸಹಾಯಕರನ್ನು ಒದಗಿಸಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಂಗವಿಕಲ ಮತದಾರರಿಗೆ ಕೈಗೊಳ್ಳಲಾದ ಕ್ರಮಗಳ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಈ ವಿಚಾರದಲ್ಲಿ ಕರ್ನಾಟಕ ಮಾದರಿಯಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲು ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲ ಮತದಾರರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ.

ಮತದಾನ ಕೇಂದ್ರಗಳಲ್ಲಿ ಗಾಲಿ ಕುರ್ಚಿಗಳು, ಅಂಗವಿಕಲರ ಸೌಲಭ್ಯಗಳ ಕುರಿತ ಸಂಜ್ಞಾ ಭಾಷೆ, ಚಿತ್ರ ಮತ್ತು ದೃಶ್ಯಗಳನ್ನು ಹೆಚ್ಚಾಗಿ ಬಳಸಲಾಗಿರುವ ಬ್ರೈಲ್ ಲಿಪಿಯ ಪೋಸ್ಟ್‌ಗಳು, ಎಲ್ಲ ಮತದಾನ ಕೇಂದ್ರಗಳಲ್ಲಿ ಬ್ರೈಲ್‌ನಲ್ಲಿ ಮುದ್ರಿಸಲಾದ ಮಾದರಿ ಮತಪತ್ರಗಳು, ಬ್ರೈಲ್ ಮನವಿ ಪತ್ರ, ಬ್ರೈಲ್ ಫೋಟೋ ಎಪಿಕ್ ಕಾರ್ಡ್, ಬ್ರೈಲ್‌ನಲ್ಲಿ ಅಭ್ಯರ್ಥಿಗಳ ಹೆಸರು ಮುದ್ರಿಸಿದ ಪೋಸ್ಟರ್, ಸಾರಿಗೆ ವ್ಯವಸ್ಥೆ ಸೇರಿ ರ್ಯಾಂಪ್, ಚಿಕಿತ್ಸಾ ಕಿಟ್, ಕುಡಿಯುವ ನೀರು, ನೆರಳು ಮತ್ತು ಬೆಳಕಿನ ವ್ಯವಸ್ಥೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲು ಯೋಜನೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News