ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಟ್ಲರ್ ನಂತಹ ಸರ್ವಾಧಿಕಾರಿಯನ್ನು ನೋಡಬೇಕಾಗುತ್ತದೆ: ಪ್ರೊ.ಮಹೇಶ್ ಚಂದ್ರಗುರು

Update: 2019-03-23 17:36 GMT

ಮೈಸೂರು,ಮಾ.23: ದೇಶದಲ್ಲಿ ರಾಜಕೀಯ ಧ್ರುವೀಕರಣ ಆಗಿದ್ದರೂ ಜಾತ್ಯತೀತ ಹಾಗೂ ದಲಿತ ಮತಗಳನ್ನು ಒಡೆಯುವ ಸಂಚಿನ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಬಿಎಸ್‍ಪಿ ಈ ಲೋಕಸಭಾ ಚುನಾವಣೆ ವೇಳೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ವಿಚಾರವಾದಿ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಗಂಭೀರ ಆರೋಪ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ದಲಿತ ವೆಲ್‍ಫೇರ್ ಟ್ರಸ್ಟ್, ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ 'ಸಂವಿಧಾನ ರಕ್ಷಿಸಿ- ಮನುವಾದಿಗಳನ್ನು ಸೋಲಿಸಿ ಅಭಿಯಾನ' ದ ಕುರಿತು ಮಾತನಾಡಿದರು. 

ಸದ್ಯದ ಪರಿಸ್ಥಿತಿಯಲ್ಲಿ ದಲಿತರ ನಿಜವಾದ ಶತ್ರು ಬಿಎಸ್‍ಪಿ ಆಗಿರುವ ಕಾರಣ ಈಗ ಮತದಾರರು ಬಿಜೆಪಿ-ಬಿಎಸ್ಪಿ ಸಂರಚನೆಯನ್ನು ಸೋಲಿಸುವುದರೊಡನೆ ಜಾತ್ಯತೀತವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಎನ್‍ಡಿಎ ನಲ್ಲಿರುವವರು ಮೂರನೇ ದರ್ಜೆ ರಾಜಕಾರಣಿಗಳೇ ಹೊರತು ಮುತ್ಸದ್ಧಿಗಳಲ್ಲ ಎಂದ ಅವರು, ಈಗ ಮಹಿಳೆಯರು ಅಸಹಾಯಕರಾಗಿದ್ದಾರೆ. ಹಕ್ಕನ್ನು ಉಲ್ಲಂಘಿಸುವುದನ್ನು ಪ್ರಶ್ನಿಸಿದವರನ್ನು ನಗರ ನಕ್ಸಲೀಯರೆಂದು ಕರೆದು ಬಂಧಿಸಲಾಗುತ್ತಿದೆ. ಈ ಕಾರಣದಿಂದಾಗಿ ಬದುಕುವ ಮೂಲಭೂತ ಹಕ್ಕನ್ನೇ ಎಲ್ಲರೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ವೇಳೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಇಲ್ಲಿ ಅಧ್ಯಕ್ಷೀಯ ಮಾದರಿ ಸರ್ಕಾರ ಬಂದು ಹಿಟ್ಲರ್ ನಂತಹ ಸರ್ವಾಧಿಕಾರಿಯನ್ನು ನೋಡಬೇಕಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News