ಕಳಸ: ಬಟ್ಟೆ ತೊಳೆಯಲು ಹೋಗಿದ್ದ ಯುವತಿ ನದಿಗೆ ಬಿದ್ದು ಮೃತ್ಯು

Update: 2019-03-23 17:39 GMT

ಚಿಕ್ಕಮಗಳೂರು, ಮಾ.23: ಬಟ್ಟೆ ತೊಳೆಯಲು ಹೋಗಿದ್ದ ಯುವತಿಯೊಬ್ಬಳು ಕಾಲು ಜಾರಿ ನದಿಗೆ ಬಿದ್ದ ಘಟನೆ ಜಿಲ್ಲೆಯ ಕಳಸ ಹೋಬಳಿ ವ್ಯಾಪ್ತಿಯ ಸಂಸೆ ಗ್ರಾಮದಲ್ಲಿ ಶನಿವಾರ ಸಂಜೆ ವರದಿಯಾಗಿದೆ.

ಸಂಸೆ ಗ್ರಾಪಂ ವ್ಯಾಪ್ತಿಯ ಕಡೇಪಾಲ್ ಗ್ರಾಮದ ಸುಪ್ರಿತಾ(26) ನದಿಗೆ ಬಿದ್ದು ಮೃತಪಟ್ಟ ಯುವತಿ ಎಂದು ತಿಳಿದು ಬಂದಿದ್ದು, ಶನಿವಾರ ಮಧ್ಯಾಹದ ವೇಳೆಯಲ್ಲಿ ಸುಪ್ರಿತಾ ತನ್ನ ಸಹೋದರ ಸುನಿಲ್ ಹಾಗೂ ಮಾವನ ಮಗ ಸುರೇಶ್ ಎಂಬವರೊಡನೆ ಸಂಸೆ ಗ್ರಾಪಂ ವ್ಯಾಪ್ತಿಯ ಕಡೇಪಾಲ್ ಗ್ರಾಮದಲ್ಲಿ ಹರಿಯುವ ಸೋಮವತಿ ನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದರು. ನದಿಯಲ್ಲಿ ಬಟ್ಟೆ ತೊಳೆದು ನದಿ ದಂಡೆಯಲ್ಲಿ ಹಿಂದಿರುಗುವಾಗ ಸುಪ್ರಿತಾ ಕಾಲು ಜಾರಿ ನದಿಗೆ ಬಿದ್ದು, ನೀರಿನಲ್ಲಿ ಮುಳುಗಿದ್ದಳು. ಈ ವೇಳೆ ಆಕೆಯ ಮಾವನ ಮಗ ಸುರೇಶ್ ನೀರಿನಲ್ಲಿ ಹುಡುಕಾಡಿದರೂ ಸುಪ್ರಿತಾ ಕಾಣದಿದ್ದಾಗ ಕೂಗಾಡಿದ್ದಾರೆ. ಈ ವೇಳೆ ಸ್ಥಳೀಯರಾದ ರಾಘವೇಂದ್ರ ಹಾಗೂ ಜಯಶೀಲ ಎಂಬವರು ನದಿಗೆ ಹಾರಿ ನೀರಿನಲ್ಲಿ ಮುಳುಗಿದ್ದ ಸುಪ್ರಿತಾಳನ್ನು ಮೇಲೆತ್ತಿದ್ದಾರೆಂದು ತಿಳಿದು ಬಂದಿದೆ.

ನೀರಿನಿಂದ ಮೇಲೆತ್ತಿದ್ದ ವೇಳೆ ಸುಪ್ರಿತಾ ಉಸಿರಾಡುತ್ತಿದ್ದರಿಂದ ಆಕೆಯನ್ನು ಆಟೊವೊಂದರಲ್ಲಿ ಕಳಸದ ಕಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸುಪ್ರಿತಾ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ. ಈ ಸಂಬಂಧ ಸುಪ್ರೀತಾಳ ಸಹೋದರ ಸುನಿಲ್ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News