ನೌಕಾ ಪಡೆಯ ಮುಂದಿನ ವರಿಷ್ಠರಾಗಿ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ ನಿಯೋಜನೆ

Update: 2019-03-23 17:40 GMT

ಹೊಸದಿಲ್ಲಿ, ಮಾ. 23: ನೌಕಾ ಪಡೆಯ ಸಿಬ್ಬಂದಿಯ ಮುಂದಿನ ಮುಖ್ಯಸ್ಥರನ್ನಾಗಿ ಉಪ ಅಡ್ಮಿರಲ್ ಕರಂಬಿರ್ ಸಿಂಗ್ ಅವರನ್ನು ಸರಕಾರ ನಿಯೋಜಿಸಲಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಈ ವರ್ಷ ಮೇಯಲ್ಲಿ ಅಡ್ಮಿರಲ್ ಸುನಿಲ್ ಲಾಂಬಾ ಅವರು ನಿವೃತ್ತರಾದ ಬಳಿಕ ಖಾಲಿಯಾಗುವ ಸ್ಥಾನಕ್ಕೆ ಸಿಂಗ್ ಅವರನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಉಪ ಅಡ್ಮಿರಲ್ ಸಿಂಗ್ ಅವರು ವಿಶಾಖಪಟ್ಟಣಂನಲ್ಲಿ ಪೂರ್ವ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್‌ನ ವರಿಷ್ಠರಾಗಿ ಸೇವೆ ಸಲ್ಲಿಸಿದ್ದರು. ಅವರು ಖಡಕ್‌ವಾಸ್ಲಾದ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಎಂದು ನೌಕಾ ಪಡೆಯ ಅಧಿಕೃತ ವೆಬ್‌ಸೈಟ್‌ನ ಲೇಖನ ಹೇಳಿದೆ. 1980 ಜುಲೈಯಲ್ಲಿ ಭಾರತೀಯ ನೌಕಾ ಪಡೆಗೆ ನಿಯೋಜಿತರಾದ ಅವರು, 1982ರಲ್ಲಿ ಹೆಲಿಕಾಪ್ಟರ್ ಪೈಲೆಟ್ ಆದರು. ಅವರು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜು ಹಾಗೂ ಮುಂಬೈಯ ನೌಕಾ ಪಡೆಯ ಯುದ್ಧ ತರಬೇತಿ ಕಾಲೇಜಿನ ಪದವೀಧರ. 36 ವರ್ಷಗಳ ಕೆರಿಯರ್‌ನಲ್ಲಿ ಅವರು ತಟ ರಕ್ಷಣಾ ಹಡಗು, ನೌಕಾ ಪಡೆ ಮಿಸೈಲ್ ಹಾಗೂ ಗೈಡೆಡ್ ಮಿಸೈಲ್ ಡಿಸ್ಟ್ರಾಯರ್ ಅನ್ನು ನಿರ್ವಹಿಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News