ನಾನು ಜೆಡಿಎಸ್ ಅಭ್ಯರ್ಥಿ, ಕಾಂಗ್ರೆಸ್ ವ್ಯಕ್ತಿ: ಪ್ರಮೋದ್ ಮಧ್ವರಾಜ್

Update: 2019-03-23 17:48 GMT

ಚಿಕ್ಕಮಗಳೂರು, ಮಾ.23: ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾರೂ ಊಹಿಸಿದಂತಹ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಾಗಿದ್ದು, ಜೆಡಿಎಸ್ ಚಿಹ್ನೆಯಡಿಯಲ್ಲಿ ಕಾಂಗ್ರೆಸ್ ಕಟ್ಟಾಳಾಗಿ ಚುನಾವಣೆ ಎದುರಿಸಲು ಜೆಡಿಎಸ್ ಬಿ ಫಾರ್ಮ್ ನೀಡಿದೆ. ಇದು ಜೆಡಿಎಸ್ ವರಿಷ್ಠರ ಹೃದಯವಂತಿಕೆಗೆ ಸಾಕ್ಷಿ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅಭ್ಯರ್ಥಿ ಘೋಷಣೆ ಬಳಿಕ ಶನಿವಾರ ಜಿಲ್ಲೆಯ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿ ನಂತರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ ಅವರು, ತಾನು ಕಾಂಗ್ರೆಸ್ ಪಕ್ಷದಲ್ಲಿ ನಂಬಿಕೆ ಹೊಂದಿದವನು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಟಿಕೆಟ್ ಯಾರಿಗಾದರೂ ಕೊಡಲಿ, ಜೆಡಿಎಸ್‌ಗೆ ಟಿಕೆಟ್ ನೀಡಿದರೂ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆಂದು ಮುಖಂಡರಲ್ಲಿ ಹೇಳಿದ್ದೆ. ಆದರೆ ಜೆಡಿಎಸ್ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯುತ್ತೇನೆಂದು ಕನಸಿನಲ್ಲೂ ಭಾವಿಸಿರಲಿಲ್ಲ. ತನ್ನನ್ನೇ ಅಭ್ಯರ್ಥಿ ಮಾಡಿದಾಗ ಕಾಂಗ್ರೆಸ್ ವರಿಷ್ಠರ ಅನುಮತಿಬೇಕೆಂದು ಸಿಎಂ ಹಾಗೂ ದೇವೇಗೌಡ ಅವರಲ್ಲಿ ಹೇಳಿದ್ದೆ. ಅದರಂತೆ ಈ ಬಗ್ಗೆ ಕಾಂಗ್ರೆಸ್ ವರಿಷ್ಠರಲ್ಲೂ ಚರ್ಚಿಸಿ ಕಣಕ್ಕಿಳಿಯಲು ಮುಂದಾಗಿದ್ದೇನೆ. ಈ ಬಾರಿ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಪರವಾದ ಅಲೆ ಇದೆ. ಇದನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳಬೇಕಾದ ಕೆಲಸವನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಮಾಡಬೇಕಿದೆ ಎಂದರು.

ದೇಶದಲ್ಲಿ ಪ್ರಸಕ್ತ ಬಿಜೆಪಿ ಆಡಳಿತದಿಂದಾಗಿ ಕೋಮುವಾದ ವಿಜೃಂಭಿಸುತ್ತಿದ್ದು, ಜನಸಾಮಾನ್ಯರ ಬದುಕು ಬವಣೆಯಾಗುತ್ತಿದೆ. ಇದರಿಂದ ದೇಶವನ್ನು ಪಾರು ಮಾಡಲು ರಾಹುಲ್‌ಗಾಂಧಿ ಅವರು ಜಾತ್ಯತೀತ ಶಕ್ತಿಗಳನ್ನು ಒಂದುಗೂಡಿಸುತ್ತಿದ್ದಾರೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಸಮಾನ ಮನಸ್ಕ ಪಕ್ಷಗಳನ್ನು ಸೇರಿಸಿ ಮೈತ್ರಿ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಉಡುಪಿಯಲ್ಲಿ ಪಕ್ಷದ ಸಂಘಟನೆ ಇದ್ದರೂ ಪ್ರಾಬಲ್ಯ ಕಡಿಮೆ ಇದೆ. ಆದರೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಮತದಾರರ ಬಳಿಗೆ ಹೋದಲ್ಲಿ ಎರಡೂ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಮತಗಳಿಂದ ನಾನು ಗೆಲ್ಲಲು ಸದಾವಕಾಶವಿದೆ ಎಂದರು.

ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಈ ಬಾರಿ ಇಲ್ಲಿ ಗೆಲ್ಲಲ್ಲ. ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿಯವರೇ ಹೇಳಿದ್ದಾರೆ. ಗೋಬ್ಯಾಕ್ ಶೋಭಾ ಅಂದಿದ್ದಾರೆ. ಆದರೆ ಮತ್ತೆ ಅವರಿಗೆ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿದೆ. ಇದಕ್ಕೆ ಯಾರು ಕಾರಣ, ಟಿಕೆಟ್ ಯಾಕಿ ಸಿಕ್ಕಿತೆಂಬುದು ರಾಜ್ಯದ ಜನರಿಗೆ ಈಗಾಗಲೇ ತಿಳಿದಿದೆ ಎಂದ ಮಧ್ವರಾಜ್, ಸಂಸದೆಯಾಗಿ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಶೂನ್ಯ ಎಂದು ಬಿಜೆಪಿಯವರೇ ಹೇಳುತ್ತಿರುವಾಗ ನಾವು ಪ್ರಚಾರ ಮಾಡುವ ಅಗತ್ಯವಿಲ್ಲ. ಅವರ ಕಳಪೆ ಸಾಧನೆಯೇ ಶೋಭಾ ಸೋಲಿಗೆ ಕಾರಣವಾಗಲಿದೆ ಎಂದು ಪ್ರಮೋದ್ ಭವಿಷ್ಯ ನುಡಿದರು.

ನಾನೀಗ ಕಾಂಗ್ರೆಸ್ ಪಕ್ಷದ ವ್ಯಕ್ತಿಯಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಗೆದ್ದ ಮೇಲೆ ಎಲ್ಲಿರುತ್ತೀಯ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ನಾನು ಗೆದ್ದ ಮೇಲೆ ರಾಜಧರ್ಮದಂತೆ ನಡೆಯುತ್ತೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಸಂಸದನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆಂದರು.

ಮಾಜಿ ಸಚಿವ ಸಗೀರ್ ಅಹ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‌ ಕುಮಾರ್, ಎ.ಎನ್.ಮಹೇಶ್, ಸಂದೀಪ್, ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಧರ್ಮೇಗೌಡ, ದೇವರಾಜ್, ಮೂರ್ತಿ, ಶಿವಾನಂದ್‌ಸ್ವಾಮಿ, ಜೆಡಿಎಸ್ ಮುಖಂಡರಾದ ಗಿರೀಶ್, ರಮೇಶ್, ಉಮಾಪತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News