ಜನಪ್ರತಿನಿಧಿಗಳಿಗೆ ಹಳ್ಳಿ ಪ್ರವೇಶ ನಿರ್ಬಂಧಿಸಿ: ಕುರುಬೂರು ಶಾಂತಕುಮಾರ್

Update: 2019-03-23 17:54 GMT

ಬೆಂಗಳೂರು, ಮಾ.23: ರಾಜ್ಯದ 65 ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರ ರೈತರಿಗೆ ಕಬ್ಬಿನ ಹಣ 4 ಸಾವಿರ ಕೋಟಿ ರೂ.ಗಳನ್ನು 4-5 ತಿಂಗಳಿನಿಂದ ಪಾವತಿಯಾಗಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಕಬ್ಬು ಬೆಳೆಗಾರರ ಸಂಘದ ಮುಖಂಡರೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಕಬ್ಬು ಅಭಿವೃದ್ಧಿ ಆಯುಕ್ತರು ಮೂರು ತಿಂಗಳಲ್ಲಿ ಮೂರು ಜನ ಬದಲಾಗಿದ್ದಾರೆ ಎಂದರು. ಸಕ್ಕರೆ ನಿಯಂತ್ರಣ ಕಾಯಿದೆ 1966ರ ಪ್ರಕಾರ ಕಬ್ಬು ಪೂರೈಸಿದ ರೈತರಿಗೆ 15 ದಿನಗಳಲ್ಲಿ ಹಣಪಾವತಿಸಬೇಕೆಂದು ನಿಯಮವಿದ್ದರೂ, ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಎರಡು ತಿಂಗಳ ಹಿಂದೆ ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆ ಮಾಲಕರಿಗೆ ಮೃದು ಸಾಲ ಘೋಷಣೆ ಮಾಡಿದೆ. ಈ ಸಾಲ ಪಡೆದು ರೈತರ ಬಾಕಿ ತೀರಿಸಬೇಕೆಂಬ ಸೂಚನೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.

ಯಾವುದೇ ಅಧಿಕಾರಸ್ಥ ಜನಪ್ರತಿನಿಧಿಗಳು ಈ ಬಗ್ಗೆ ಕಿಂಚಿತ್ತು ಮಾತನಾಡಿಲ್ಲ. ಲೋಕಸಭಾ ಚುನಾವಣೆ ಪ್ರಚಾರಕ್ಕೆ ಹಳ್ಳಿಗಳಿಗೆ ಬಂದಾಗ ಪ್ರವೇಶ ನಿರ್ಬಂಧಿಸಿ ಪ್ರಶ್ನಿಸಬೇಕೆಂದು ಕುರುಬೂರು ಶಾಂತಕುಮಾರ್ ಕರೆ ನೀಡಿದರು.

156 ತಾಲೂಕುಗಳು ಬರಗಾಲದಿಂದ ತತ್ತರಿಸಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಲ್ಲ, ದನ ಕರುಗಳಿಗೆ ಮೇವಿಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಇಲ್ಲ. ಇದೆಲ್ಲವನ್ನು ಮರೆತು ಹಣ ಬಲ, ಜಾತಿ ಬಲ ತೋಳು ಬಲಗಳ ಚುನಾವಣೆಗೆ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ರೈತರನ್ನು ಮೋಸಗೊಳಿಸಲು ಆಕರ್ಷಕವಾದ ಚುನಾವಣಾ ಪ್ರಣಾಳಿಕೆ ಹೊರಡಿಸುವ ರಾಜಕೀಯ ಪಕ್ಷಗಳಿಗೆ ಕಡಿವಾಣ ಹಾಕಬೇಕು. ಮತದಾರರನ್ನು ವಂಚಿಸುವ ಕಾಯ್ದೆಯ ಅನ್ವಯ, ಅಂತಹ ರಾಜಕೀಯ ಪಕ್ಷಗಳನ್ನು ಚುನಾವಣೆಯಿಂದ ನಿಷೇಧಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಸ್.ಎನ್.ಬಸವಣ್ಣನವರ್, ಎಂ.ವಿ.ಗಾಡಿ, ಎನ್.ಎಚ್.ದೇವಕುಮಾರ್, ಸುರೇಶ್ ಪಾಟೀಲ್, ದೇವರಾಜ್, ಸಿದ್ದಪ್ಪ ಬಜಣ್ಣನವರ್, ಈರಣ್ಣ, ಲಕ್ಷ್ಮಿದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News