ಕಟ್ಟಡಗಳಿಗೂ ದೃಢೀಕರಣ ಪತ್ರ ನೀಡುವ ಅಗತ್ಯವಿದೆ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್

Update: 2019-03-23 18:12 GMT

ಬೆಂಗಳೂರು, ಮಾ. 23: ಧಾರವಾಡದ ಕಟ್ಟಡ ದುರಂತ ಪ್ರಕರಣದಿಂದ ರಾಜ್ಯ ಸರಕಾರ ದೊಡ್ಡಪಾಠ ಕಲಿತಿದ್ದು, ಈ ಸಂಬಂಧ ಹೊಸ ಕಾನೂನು ರಚಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ಧಾರವಾಡ ಕುಮಾರೇಶ್ವರ ನಗರದ ಕಟ್ಟಡ ಕುಸಿದು ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ವಾಸಕ್ಕೆ ಯೋಗ್ಯವಲ್ಲದ ಕಟ್ಟಡಗಳು ಎಷ್ಟು ಎನ್ನುವುದರ ಬಗ್ಗೆ ಪರಿಶೀಲನೆಯಾಗಬೇಕಿದೆ. ರಾಜ್ಯದಲ್ಲಿ ಎಲ್ಲ ಕಟ್ಟಡಗಳನ್ನು ಪರಿಶೀಲಿಸಿ ಅವುಗಳ ಬಾಳಿಕೆ ಬಗ್ಗೆ ದೃಢೀಕರಣ ಪತ್ರ ನೀಡುವ ಕಾರ್ಯ ಆಗಬೇಕಿದೆ ಎಂದರು.

ರಾಜ್ಯದಲ್ಲಿ ಇಂತಹ ಅನೇಕ ಕಟ್ಟಡಗಳಿವೆ. ಪ್ರತಿ ಕಟ್ಟಡವನ್ನೂ ಪರಿಶೀಲಿಸಿ ದೃಢೀಕರಿಸುವ ಕಾರ್ಯ ಆಗಬೇಕಿದೆ. ನಗರಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಆಡಳಿತ ಇದನ್ನು ಮಾಡಬೇಕು. ಘಟನೆ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಯಾರೋ ಮಾಡಿದ ತಪ್ಪಿಗೆ ಸಾಮಾನ್ಯ ಜನ ನೋವು ಅನುಭವಿಸಬೇಕಾಗಿದೆ. ಪ್ರತಿ ಹಳ್ಳಿ, ನಗರದ ಎಲ್ಲ ಕಟ್ಟಡಗಳ ಕಾಮಗಾರಿ ಮೇಲೆ ನಿಗಾ ಇಡಬೇಕು. ಸರಿಯಾದ ರೀತಿಯಲ್ಲಿ ದಾಖಲೀಕರಣ ಆಗಬೇಕು. ಈ ಸಂಬಂಧ ಸರಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಈವರೆಗೆ 15 ಮೃತದೇಹ ಪತ್ತೆಯಾಗಿದ್ದು, ಇದೊಂದು ದುರದೃಷ್ಟದ ಘಟನೆ. ಕಟ್ಟಡ ಕುಸಿಯುವ ಒಂದು ವಾರದ ಹಿಂದೆ ಮುನ್ಸೂಚನೆ ಸಿಕ್ಕಿತ್ತು. ಮಾಲಕರು, ಎಂಜಿನಿಯರ್ ಬೇಜವಾಬ್ದಾರಿ ತೋರಿದ್ದಾರೆ. ನಕ್ಷೆ, ವಿನ್ಯಾಸಕಾರ ಎಚ್ಚರಿಕೆ ವಹಿಸಬೇಕಿತ್ತು. ಆದರೆ, ಯಾವುದನ್ನೂ ಮಾಡಿಲ್ಲ ಎಂದರು.

ಇದೀಗ ಏಳು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮೃತರ ಕುಟುಂಬಕ್ಕೆ ತಲಾ 2ಲಕ್ಷ ರೂ.ಪರಿಹಾರ ನೀಡಲಾಗಿದೆ. ಗಾಯಾಳುಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು ಎಂದ ಅವರು, ಜನರ ಸುರಕ್ಷತೆ ದೃಷ್ಟಿಯಿಂದ ಬಹುಮಹಡಿ ಕಟ್ಟಡ ನಿರ್ಮಾಣ ಸಂಬಂಧ ಹೊಸ ಕಾನೂನು ರೂಪಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News