ಅರ್ಜೆಂಟೀನಕ್ಕೆ ಆಘಾತ ನೀಡಿದ ವೆನೆಝುವೆಲ

Update: 2019-03-23 19:01 GMT

ಅಟ್ಲೆಟಿಕೊ ಮ್ಯಾಡ್ರಿಡ್, ಮಾ.23: ಅರ್ಜೆಂಟೀನ ತಂಡ ವೆನೆಝುವೆಲ ವಿರುದ್ಧ ಶುಕ್ರವಾರ ನಡೆದ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ 1-3 ಅಂತರದಿಂದ ಆಘಾತಕಾರಿ ಸೋಲುಂಡಿದೆ. 2018ರ ವಿಶ್ವಕಪ್ ಬಳಿಕ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಸೋಲಿನ ಕಹಿ ಉಂಡರಲ್ಲದೆ, ಗಾಯದ ಸಮಸ್ಯೆಗೀಡಾಗಿ ಮುಂದಿನ ವಾರ ಮೊರೊಕ್ಕೊದಲ್ಲಿ ನಡೆಯುವ ಸೌಹಾರ್ದ ಪಂದ್ಯದಿಂದ ಹೊರಗುಳಿದಿದ್ದಾರೆ.

ಅರ್ಜೆಂಟೀನ ವಿರುದ್ದ ಆಡಿದ ಕಳೆದ 23 ಪಂದ್ಯಗಳಲ್ಲಿ ಎರಡನೇ ಬಾರಿ ಜಯ ದಾಖಲಿಸಿರುವ ವೆನೆಝುವೆಲ ಪರವಾಗಿ ಸಲೊಮನ್ ರಾಂಡನ್ 6ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ಜಾನ್ ಮುರಿಲ್ಲೊ(44ನೇ ನಿಮಿಷ) ಹಾಗೂ ಜೋಸೆಫ್ ಮಾರ್ಟಿನೆಝ್(75ನೇ ನಿಮಿಷದಲ್ಲಿ ಪೆನಾಲ್ಟಿ) ತಲಾ ಒಂದು ಗೋಲು ಗಳಿಸಿ ಭರ್ಜರಿ ಗೆಲುವಿಗೆ ನೆರವಾದರು. 17ನೇ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ 23ರ ಹರೆಯದ ಮುರಿಲ್ಲೊ ಮೂರನೇ ಬಾರಿ ಗೋಲು ಗಳಿಸಿದರು. ಅರ್ಜೆಂಟೀನದ ಪರ ಫಾರ್ವರ್ಡ್ ಆಟಗಾರ ಲೌಟಾರೊ ಮಾರ್ಟಿನೆಝ್ 59ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದ್ದಾರೆ.

ರಶ್ಯದಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನ ತಂಡ ಫ್ರಾನ್ಸ್ ವಿರುದ್ಧ್ದ ಅಂತಿಮ 16ರ ಸುತ್ತಿನಲ್ಲಿ ಎಡವಿದ ಬಳಿಕ ಮೆಸ್ಸಿ ಸ್ವಯಂ 6 ತಿಂಗಳ ಕಾಲ ಸಕ್ರಿಯ ಫುಟ್ಬಾಲ್‌ನಿಂದ ದೂರ ಉಳಿದಿದ್ದು, ಈ ಅವಧಿಯಲ್ಲಿ ಆರು ಸೌಹಾರ್ದ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಇಂದು 129ನೇ ಪಂದ್ಯ ಆಡಿದ ಮೆಸ್ಸಿ ನಿರಾಶಾದಾಯಕ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News