ಮಿಲಿಟರಿ ಬ್ಯಾಂಡ್ ಬಾರಿಸಿ ಐಪಿಎಲ್‌ಗೆ ಚಾಲನೆ

Update: 2019-03-23 19:09 GMT

ಹೊಸದಿಲ್ಲಿ, ಮಾ.23: ಹನ್ನೆರಡನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಕ್ರಿಕೆಟ್ ಟೂರ್ನಿಯು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ಶನಿವಾರ ಮುಖಾಮುಖಿಯಾಗುವುದರೊಂದಿಗೆ ಆರಂಭವಾಗಿದೆ. ಈ ಪಂದ್ಯದ ಆರಂಭಕ್ಕೆ ಮೊದಲು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಂಪ್ರದಾಯದಂತೆ ಕಣ್ಣುಕುಕ್ಕುವ ಉದ್ಘಾಟನಾ ಸಮಾರಂಭದ ಬದಲಿಗೆ ಮಿಲಿಟರಿ ಬ್ಯಾಂಡ್‌ಗಳನ್ನು ನುಡಿಸಲಾಯಿತು. ಭಾರತೀಯ ಸಶಸ್ತ್ರ ಪಡೆಗಳ ಕಲ್ಯಾಣಕ್ಕೆ ಬಿಸಿಸಿಐ 20 ಕೋ.ರೂ. ದೇಣಿಗೆ ನೀಡುವ ಮೊದಲು ಮದ್ರಾಸ್ ರೆಜಿಮೆಂಟ್‌ನ ಬ್ಯಾಂಡ್ ಕಾರ್ಯಕ್ರಮ ನೆರವೇರಿತು. ‘‘15ರಿಂದ 20 ನಿಮಿಷಗಳ ಕಾಲ ಕಾರ್ಯಕ್ರಮ ನಡೆಯಿತು. ಭಾರತೀಯ ಸಶಸ್ತ್ರ ಪಡೆಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯುವ ಮೊದಲು ಬ್ಯಾಂಡ್ ಮೊಳಗಿಸುವ ಕಾರ್ಯಕ್ರಮ ನಡೆಯಿತು. ಟಾಸ್ ಚಿಮ್ಮುವ ಪ್ರಕ್ರಿಯೆಯನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು’’ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ‘‘ಪಂದ್ಯ ರಾತ್ರಿ 8 ಗಂಟೆ ಆರಂಭವಾಗಿದ್ದು, ಟಾಸ್‌ನ್ನು 7:30ಕ್ಕೆ ನಡೆಸಲಾಯಿತು. 7.20ರಿಂದ 7.30ರ ತನಕ ಮದ್ರಾಸ್ ರೆಜಿಮೆಂಟ್ ಬ್ಯಾಂಡ್ ಕಾರ್ಯಕ್ರಮ ನಡೆಸಿಕೊಟ್ಟಿತು. ಸುಪ್ರೀಂಕೋರ್ಟ್ ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿ ಸಮಿತಿಯ ಸದಸ್ಯರುಗಳು, ಭಾರತೀಯ ಸಶಸ್ತ್ರ ಪಡೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News