ಉತ್ತರ ಪ್ರದೇಶ: ಮೂರನೇ ಒಂದರಷ್ಟು ಬಿಜೆಪಿ ಸಂಸದರಿಗೆ ಟಿಕೆಟ್ ಇಲ್ಲ?

Update: 2019-03-24 03:44 GMT

ಹೊಸದಿಲ್ಲಿ, ಮಾ.24: ಉತ್ತರ ಪ್ರದೇಶದ ಹಾಲಿ ಸಂಸದರ ಪೈಕಿ ಮೂರನೇ ಒಂದರಷ್ಟು ಮಂದಿಗೆ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶ ಕೈತಪ್ಪಲಿದೆ. ಪಕ್ಷದ ನಾಯಕತ್ವ ಮೂರು ಪ್ರಮುಖ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಮುಂದಾಗಿದ್ದು, ಗೆಲುವಿನ ಸಾಧ್ಯತೆ, ಸಂಸದರ ಸಾಧನೆ ಹಾಗೂ ನಾಯಕನ ಇಮೇಜ್ ಆಧಾರದಲ್ಲಿ ಟಿಕೆಟ್ ನೀಡಲು ನಿರ್ಧರಿಸಿದೆ.

ಹಾಲಿ ಸಂಸದರ ಪೈಕಿ ಒಟ್ಟು 25 ಸಂಸದರ ವರೆಗೂ ಟಿಕೆಟ್ ತಪ್ಪಬಹುದು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ಹೊರೆ ಎನಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರಲು ಅಮಿತ್ ಶಾ ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪಕ್ಷದ ಮುಖಂಡರು ಪ್ರತಿಯೊಂದು ಕ್ಷೇತ್ರದ ಹಾಗೂ ಅಭ್ಯರ್ಥಿಯ ಪೂರ್ವಾಪರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ನಮೋ ಆ್ಯಪ್ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಹೆಸರುಗಳನ್ನು ಅಂತಿಮಪಡಿಸುತ್ತಿದ್ದಾರೆ. ನಮೋ ಆ್ಯಪ್ ಮೂಲಕ ಸ್ವತಃ ಮೋದಿಯವರೇ ಕೆಲ ಪ್ರಶ್ನೆಗಳನ್ನು ನೀಡಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದಿದ್ದು, ಇದು ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಧಾನ ಅಂಶವಾಗುತ್ತಿದೆ ಎಂದು ಹಿರಿಯ ಮುಖಂಡರು ವಿವರ ನೀಡಿದ್ದಾರೆ.

ಟಿಕೆಟ್ ಕೈ ತಪ್ಪಿದ ಮುಖಂಡರು ಬಂಡಾಯದ ಬಾವುಟ ಹಾರಿಸುವ ಸಾಧ್ಯತೆಯನ್ನು ಕಡೆಗಣಿಸಿ, ಸಾರ್ವಜನಿಕ ಅಭಿಪ್ರಾಯಕ್ಕೆ ಅನುಗುಣವಾಗಿ ಮೂರು ಹಂತದ ಮಾನದಂಡದ ಆಧಾರದಲ್ಲಿ ಆಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಮುಖ್ಯಮಂತ್ರಿ ಆದಿತ್ಯನಾಥ್ ಸಮ್ಮುಖದಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News