'ಚೌಕಿದಾರ'ರ ನೇಮಕದಲ್ಲಿ ಅಕ್ರಮ: ಪ್ರಕರಣ ಬಯಲಿಗೆಳೆದ ಸಿಬಿಐ

Update: 2019-03-24 03:54 GMT

ಹೊಸದಿಲ್ಲಿ, ಮಾ.24: ಭಾರತದ ಆಹಾರ ನಿಗಮ (ಎಫ್‌ಸಿಐ)ದ ದಿಲ್ಲಿ ಪ್ರಾದೇಶಿಕ ಕಚೇರಿಯಲ್ಲಿ ಕಾವಲುಗಾರರ (ಚೌಕಿದಾರ) ನೇಮಕದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿದೆ.

ಎಫ್‌ಸಿಐ 2017ರ ಎಪ್ರಿಲ್ 10ರಂದು ದಿಲ್ಲಿಯಲ್ಲಿ ಕಾವಲುಗಾರರ ನೇಮಕಾತಿಗೆ ಸಂಬಂಧಿಸಿದಂತೆ ಏಸ್ ಇಂಟಗ್ರೇಟೆಡ್ ಸೊಲ್ಯೂಶನ್ಸ್ ಲಿಮಿಟೆಡ್ ಎಂಬ ಸಂಸ್ಥೆಗೆ ಹೊರಗುತ್ತಿಗೆ ನೀಡಿತ್ತು. 53 ಹುದ್ದೆಗಳಿಗೆ 1.08 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. 2018ರ ಫೆಬ್ರವರಿ 18ರಂದು ನಡೆದ ಲಿಖಿತ ಪರೀಕ್ಷೆಗೆ ಸ್ನಾತಕೋತ್ತರ ಪದವೀಧರರು ಸೇರಿದಂತೆ 98,771 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 171 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ದೈಹಿಕ ಸಾಮರ್ಥ್ಯ ಹಾಗೂ ದಾಖಲಾತಿ ಪರಿಶೀಲನೆ ಬಳಿಕ 96 ಮಂದಿಯನ್ನು ಪಟ್ಟಿ ಮಾಡಿ, 53 ಮಂದಿಯನ್ನು ಆಯ್ಕೆ ಮಾಡಲಾಯಿತು ಹಾಗೂ 43 ಮಂದಿಯನ್ನು ನಿರೀಕ್ಷಣಾ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ನಿಮಯ ಉಲ್ಲಂಘಿಸಿದ್ದನ್ನು ಪತ್ತೆ ಮಾಡಿದ ಎಫ್‌ಸಿಐ, ಈ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಮನವಿ ಸಲ್ಲಿಸಿತ್ತು. ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಕೆಲವರು ಆಯ್ಕೆಯಾಗಿ, ಅರ್ಹ ಅಭ್ಯರ್ಥಿಗಳಿಗೆ ಅವಕಾಶ ವಂಚನೆಯಾಗಿರುವುದಕ್ಕೆ ಪುರಾವೆಗಳಿವೆ ಎಂದು ಎಫ್‌ಸಿಐ ವಾದಿಸಿತ್ತು.

ಈ ಬಗ್ಗೆ ತನಿಖೆ ನಡೆಸಿದ ಸಿಬಿಐ, ನೇಮಕಾತಿ ಸಂಸ್ಥೆ ಹಾಗೂ ಅಭ್ಯರ್ಥಿಗಳಿಂದ ಅಪರಾಧ ಪಿತೂರಿ, ಫೋರ್ಜರಿ ಮೂಲಕ ವಂಚನೆ ಮತ್ತು ಸ್ವಜನಪಕ್ಷಪಾತದಂಥ ಅಕ್ರಮಗಳು ನಡೆದಿವೆ ಎಂಬ ತೀರ್ಮಾನಕ್ಕೆ ಬಂದಿವೆ. 96 ಅಭ್ಯರ್ಥಿಗಳ ಪೈಕಿ ಕನಿಷ್ಠ 14 ಮಂದಿಯ ಆಯ್ಕೆ ಅಕ್ರಮ ಎಂದು ಸಿಬಿಐ ಅಭಿಪ್ರಾಯಪಟ್ಟಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಎಫ್‌ಸಿಐ ನೇಮಕದಲ್ಲೂ ಇಂಥದ್ದೇ ಅಕ್ರಮ ನಡೆದ ದೂರುಗಳಿದ್ದು, ಪರಿಶೀಲನೆ ನಡೆದಿದೆ ಎಂದು ಸಿಬಿಐ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News