ಶ್ರೀನಿವಾಸ ಪ್ರಸಾದ್‍ರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ: ಸಂಸದ ದ್ರುವನಾರಾಯಣ್‍

Update: 2019-03-24 18:57 GMT

ಕೊಳ್ಳೇಗಾಲ,ಮಾ.24: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಹುಲ್‍ ಗಾಂಧಿ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿರುವುದರಿಂದ ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾಂತರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಕೋಮುವಾದಿ ಪಕ್ಷ ದೂರ ಇಡಬೇಕೆಂದು ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರು ಹೇಳಿದರು.

ತಾಲೂಕಿನ ಚಿಲಕವಾಡಿ ಬೆಟ್ಟದ ಸಮೀಪವಿರುವ ಶಂಭುಲಿಂಗೇಶ್ವರ ಶಾಲೆಯ ಆವರಣದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸ್ಕೂಲ್ ಮಕ್ಕಳಿಗೆ ಸೈಕಲ್ ಹಾಗೂ ಭಾಗ್ಯಲಕ್ಷ್ಮೀ ಯೋಜನೆ ಬಿಟ್ಟರೆ ಯಾವುದೆ ಜನಪರ ಕೆಲಸ ಮಾಡಲಿಲ್ಲ. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ತಕ್ಷಣವೇ ಅನ್ನಭಾಗ್ಯ ಯೋಜನೆ, ಸೊಸೈಟಿಗಳಲ್ಲಿ ರೈತ ಪಡೆದ 50 ಸಾವಿರದವರೆಗೆ ಸಾಲ ಮನ್ನಾ ಮಾಡಿ ರೈತರ ಪರವಾಗಿ ನಿಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದರು. ಹೀಗಾಗಿ ಎಂದಿಗೂ ಬಿಜೆಪಿಗೆ ಮತ ಹಾಕದೆ ಜನಾನುರಾಗಿ ಹಾಗೂ ಈ ಕ್ಷೇತ್ರಕ್ಕೆ ಉತ್ತಮ ಕೆಲಸಗಳನ್ನು ಮಾಡಿರುವ ದ್ರುವನಾರಾಯಣ್‍ರವರಿಗೆ ಮತ ನೀಡಿ ಗೆಲ್ಲಿಸಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಸಂಸದ ಆರ್.ದ್ರುವನಾರಾಯಣ್‍ ಮಾತನಾಡಿ, ನಾನು ವಿ.ಶ್ರೀನಿವಾಸಪ್ರಸಾದ್‍ರವಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ಅವರ ಬಗ್ಗೆ ಗೌರವವಾಗಿ ನಡೆದುಕೊಂಡು ಬಂದಿದ್ದೇನೆ. ಅವರು ನಂಜನಗೂಡಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಿಂತಿದ್ದಾಗ ಆರೋಗ್ಯ ಹದಗೆಟ್ಟಾಗ ನಾನೇ ಇವರ ಪರ ನಿಂತು ಪ್ರಚಾರ ಮಾಡಿದ್ದೇನೆ. ಅಂದು ಪ್ರಸಾದ್‍ರವರು ಗೆದ್ದು ಕಂದಾಯ ಮಂತ್ರಿ ಆದರು. ಅವರನ್ನು ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಮಂತ್ರಿಮಂಡಲದಿಂದ ತೆಗೆಯಲಿಲ್ಲ. ಆನಾರೋಗ್ಯದಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ, ಕಮರುದ್ದೀನ್, ಅಂಬರೀಷ್‍ರನ್ನು ಸಹ ಕೈಬಿಟ್ಟರು. ಅಂದು ಇವರನ್ನು ಮಂತ್ರಿಮಂಡಲದಲ್ಲಿ ಉಳಿಸಲು ಪ್ರಯತ್ನಿಸಿದೆ. ನಾನು ಎಂದೂ ಪ್ರಸಾದ್‍ರವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲ್ಲ. ನನ್ನನ್ನು ಬಿಜೆಪಿ ಸೇರಲು ಪ್ರಯತ್ನಿಸಿದರೂ ನಾನು ಹೋಗಲಿಲ್ಲ. ಇದೊಂದು ವಿಚಾರ ಬಿಟ್ಟರೆ ಪ್ರಸಾದ್‍ರವರಿಗೆ ನನಗೂ ಯಾವುದೇ ವೈಮನಸ್ಸು ಇಲ್ಲ. ಆದರೆ ಸಿದ್ದರಾಮಯ್ಯನವರನ್ನು ಏಕ ವಚನದಲ್ಲಿ ಸಂಭೋದಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಗುಂಡ್ಲುಪೇಟೆ ಗಣೇಶ್‍ ಪ್ರಸಾದ್, ಮಾಜಿ ಶಾಸಕರುಗಳಾದ ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಬಾಲರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ವಸಂತಿ ಶಿವಣ್ಣ, ಕಿನಕಹಳ್ಳಿ ರಾಚಯ್ಯ, ಡಿ.ಎನ್.ನಟರಾಜು, ಸದಾಶಿವಮೂರ್ತಿ ಸೇರಿದಂತೆ ಮುಖಂಡರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News