ಪ್ರಿಯಾಂಕಾ ಗಾಂಧಿ- ಆದಿತ್ಯನಾಥ್ ಟ್ವಿಟ್ಟರ್ ವಾರ್!

Update: 2019-03-25 03:39 GMT

ಲಕ್ನೋ, ಮಾ.25: ಉತ್ತರ ಪ್ರದೇಶದ ಕಬ್ಬು ಬೆಳೆಗಾರರಿಗೆ 10 ಸಾವಿರ ಕೋಟಿ ರೂಪಾಯಿಬಾಕಿ ಇದೆ ಎಂದು ಆಪಾದಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾಡಿದ ಟ್ವೀಟ್, ಉತ್ತರ ಪ್ರದೇಶದಲ್ಲಿ ಬಿರುಗಾಳಿ ಎಬ್ಬಿಸಿದೆ. ಜತೆಗೆ ಇದು ಪ್ರಿಯಾಂಕಾ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ನಡುವೆ ಟ್ವಿಟ್ಟರ್ ಸಮರಕ್ಕೂ ಕಾರಣವಾಗಿದೆ. 2012 ಮತ್ತು 2017ರಲ್ಲಿ ರಾಜ್ಯದ ರೈತರು ಹಸಿವಿನಿಂದ ಬಳಲುತ್ತಿದ್ದಾಗ ರೈತರ ಹಿತೈಷಿಗಳು ಎಲ್ಲಿದ್ದರು ಎಂದು ಆದಿತ್ಯನಾಥ್ ಪ್ರಶ್ನಿಸಿದ್ದಾರೆ.

ತಮ್ಮ ಸರ್ಕಾರದ ಅವಧಿಯಲ್ಲಿ ಕಬ್ಬು ಬೆಳೆಗಾರರಿಗೆ ದಾಖಲೆ ಮೊತ್ತದ ಪಾವತಿಯಾಗಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಬಾಕಿ ಮೊತ್ತ 57,800 ಕೋಟಿ ರೂಪಾಯಿ ಇತ್ತು. ಈ ಮೊತ್ತ ಹಲವು ರಾಜ್ಯಗಳ ಬಜೆಟ್ ಗಾತ್ರಕ್ಕಿಂತಲೂ ದೊಡ್ಡದು. ಆದರೆ ನಾವು ಅದನ್ನು ಪಾವತಿಸಿದ್ದೇವೆ. ಹಿಂದಿನ ಎಸ್ಪಿ- ಬಿಎಸ್ಪಿ ಸರ್ಕಾರಗಳು ಕಬ್ಬು ಬೆಳೆಗಾರರಿಗೆ ಏನೂ ಮಾಡದ ಕಾರಣ ಇಷ್ಟೊಂದು ದೊಡ್ಡ ಮೊತ್ತ ಬಾಕಿ ಉಳಿದಿದೆ" ಎಂದು ಅವರು ದೂರಿದ್ದಾರೆ.

ಇದಕ್ಕೂ ಮುನ್ನ ಪ್ರಿಯಾಂಕಾ ಗಾಂಧಿ, "ಚೌಕಿದಾರರು ಕೇವಲ ಶ್ರೀಮಂತರಿಗಾಗಿದ್ದಾರೆಯೇ ವಿನಃ ಬಡವರ ಪರವಾಗಿಲ್ಲ" ಎಂದು ವ್ಯಂಗ್ಯವಾಡಿ 10 ಸಾವಿರ ಕೋಟಿ ರೂಪಾಯಿ ಬಾಕಿ ವಿಷಯ ಉಲ್ಲೇಖಿಸಿದ್ದರು. ಪಶ್ಚಿಮ ಉತ್ತರ ಪ್ರದೇಶದ ಕಬ್ಬು ಬೆಳೆಯುವ ಈ ಪ್ರದೇಶದಲ್ಲಿ ಎಪ್ರಿಲ್ 11ರಂದು ಮತದಾನ ನಡೆಯುತ್ತದೆ. 2018ರ ಕೈರಾನಾ ಉಪಚುನಾವಣೆಯಲ್ಲಿ ಕೂಡಾ ವಿರೋಧ ಪಕ್ಷಗಳು ಈ ವಿಷಯವನ್ನು ಪ್ರಧಾನವಾಗಿ ಬಿಂಬಿಸಿದ್ದವು. ಇದರಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು.

ಪ್ರಿಯಾಂಕಾ ಟ್ವೀಟನ್ನು ಇದೀಗ ಸ್ಥಳೀಯ ಬಿಜೆಪಿ ಮುಖಂಡರು, ಮತ್ತೆ ರೈತರ ಭಾವನೆಗಳನ್ನು ಕೆರಳಿಸುವ ತಂತ್ರ ಎಂದು ದೂರಿದ್ದಾರೆ. ರಾಜ್ಯದಲ್ಲಿ ಅತ್ಯಧಿಕ ರೈತರ ವೋಟ್‌ಬ್ಯಾಂಕ್ ಹೊಂದಿರುವ ಆರ್‌ಎಲ್‌ಡಿ ಕೂಡಾ ಈ ವಿಷಯವನ್ನು ಪ್ರಧಾನವಾಗಿ ಪ್ರಸ್ತಾಪಿಸುತ್ತಿದೆ. ಈ ಚುಣಾವಣೆಯಲ್ಲಿ ಆರ್‌ಎಲ್‌ಡಿ, ಎಸ್ಪಿ, ಬಿಎಸ್ಪಿ ಮೈತ್ರಿ ಮಾಡಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News