ಚುನಾವಣೆಯಲ್ಲಿ ಸ್ಪರ್ಧಿಸಲು ಫುಟ್ಬಾಲ್ ಜರ್ಸಿಯನ್ನು ಹರಾಜಿಗಿಟ್ಟ ಭುಟಿಯಾ

Update: 2019-03-25 05:15 GMT

ಗ್ಯಾಂಗ್‌ಟಾಕ್, ಮಾ.25: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಮ್ರಾ ಸಿಕ್ಕಿಂ ಪಕ್ಷ(ಎಚ್‌ಎಸ್‌ಪಿ)ಪರವಾಗಿ ಮೊದಲ ಬಾರಿ ಸ್ಪರ್ಧಿಸಲು ನಿಧಿ ಸಂಗ್ರಹಕ್ಕಾಗಿ ಭಾರತದ ಮಾಜಿ ಫುಟ್ಬಾಲ್ ನಾಯಕ ಭೈಚುಂಗ್ ಭುಟಿಯಾ ತನ್ನ ಎರಡು ನೆಚ್ಚಿನ ಜರ್ಸಿಗಳನ್ನು ರವಿವಾರ ಹರಾಜಿಗಿಟ್ಟಿದ್ದಾರೆ.

ಎರಡು ಜರ್ಸಿಗಳ ಪೈಕಿ ಒಂದು ಜರ್ಸಿಯನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿದ್ದ ‘ಬಡತನದ ವಿರುದ್ಧ ಪಂದ್ಯ’ದಲ್ಲಿ ಧರಿಸಿ ಆಡಿದ್ದರು. ಮತ್ತೊಂದು ಜರ್ಸಿಯನ್ನು 2012ರಲ್ಲಿ ಬೇಯರ್ನ್ ಮ್ಯೂನಿಕ್ ವಿರುದ್ಧ ಆಡಿದ್ದ ವಿದಾಯದ ಪಂದ್ಯದಲ್ಲಿ ಧರಿಸಿದ್ದರು. ಜರ್ಸಿಯಲ್ಲಿ ಫುಟ್ಬಾಲ್ ದಿಗ್ಗಜರಾದ ಫ್ರಾನ್ಸ್‌ನ ಝೈನುದ್ದೀನ್ ಝೈದಾನ್ ಹಾಗೂ ಪೋರ್ಚುಗಲ್‌ನ ಫಿಗೊ ಸಹಿತ ಇತರರ ಹಸ್ತಾಕ್ಷರವಿದೆ.

 ‘‘ಪ್ರೀತಿಯ ಫುಟ್ಬಾಲ್ ಅಭಿಮಾನಿಗಳೇ ಹಾಗೂ ದೇಶಬಾಂಧವರೆ, ನಾವು ಸಿಕ್ಕಿಂನಲ್ಲಿ ರಾಜಕೀಯ ಪಕ್ಷವೊಂದನ್ನು ಆರಂಭಿಸುತ್ತಿದ್ದೇವೆ. ಇತರ ರಾಜ್ಯಗಳಂತೆಯೇ ನಮ್ಮಲ್ಲೂ ಕೂಡ ಭ್ರಷ್ಟಾಚಾರ, ನಿರುದ್ಯೋಗ, ರೈತರ ಬಿಕ್ಕಟ್ಟು ಇತ್ಯಾದಿ ಸಮಸ್ಯೆಗಳಿವೆ. ಈ ಹೋರಾಟದಲ್ಲಿ ನಿಮ್ಮ ಬೆಂಬಲದ ಅಗತ್ಯವಿದೆ ಎಂದು ಟ್ವಿಟರ್‌ನಲ್ಲಿ ವಿವರವಾಗಿ ಬರೆದಿರುವ ಭುಟಿಯಾ ನಿಧಿ ಸಂಗ್ರಹವು ಸಂಪೂರ್ಣವಾಗಿ ಪಾರದರ್ಶಕವಾಗಿರಲಿದೆ’’ ಎಂದು ಭರವಸೆ ನೀಡಿದ್ದಾರೆ.

ಭುಟಿಯಾ ಕಳೆದ ವರ್ಷದ ಮಾ.31 ರಂದು ಎಚ್‌ಎಸ್‌ಪಿಯನ್ನು ಸ್ಥಾಪಿಸಿದ್ದರು. ಮುಂದಿನ ಐದು ವರ್ಷಗಳಲ್ಲಿ ‘ಹ್ಯಾಪಿ ಸಿಕ್ಕಿಂ’ ಆಗುವ ನಿಟ್ಟಿಯಲ್ಲಿ ತನ್ನ ಪಕ್ಷ ನೀತಿಗಳನ್ನು ಜಾರಿಗೆ ತರಲಿದೆ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.

ಪುಟ್ಟ ರಾಜ್ಯ ಸಿಕ್ಕಿಂನಲ್ಲಿ ಸಿಕ್ಕಿಂ ಡೆಮೊಕ್ರಾಟಿಕ್ ಫ್ರಂಟ್(ಎಸ್‌ಡಿಎಫ್)ಪ್ರಾಬಲ್ಯ ಜಾಸ್ತಿಯಿದೆ. ಈ ರಾಜ್ಯ ಕೇವಲ ಒಂದು ಲೋಕಸಭಾ ಸದಸ್ಯನನ್ನು ಸಂಸತ್ತಿಗೆ ಕಳುಹಿಸಿಕೊಡುತ್ತದೆ. ಎಸ್‌ಡಿಎಫ್ 2009 ಹಾಗೂ 2014ರಲ್ಲಿ ಸಂಸತ್ ಚುನಾವಣೆಯಲ್ಲಿ ಜಯ ದಾಖಲಿಸಿತ್ತು.

ಈ ಹಿಂದೆ ತೃಣಮೂಲ ಕಾಂಗ್ರೆಸ್‌ನ್ನು ಸೇರ್ಪಡೆಯಾಗಿದ್ದ ಭುಟಿಯಾ 2014ರ ಲೋಕಸಭಾ ಚುನಾವಣೆಯಲ್ಲಿ ಡಾರ್ಜಲಿಂಗ್‌ನಲ್ಲಿ ಸ್ಪರ್ಧಿಸಿದ್ದರು. 2016ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮಬಂಗಾಳದ ಸಿಲಿಗುರಿಯಿಂದ ಸ್ಪರ್ಧಿಸಿದ್ದರು. ಆದರೆ ಎರಡೂ ಬಾರಿಯೂ ಸೋತಿದ್ದರು.

ಸಿಕ್ಕಿಂನಲ್ಲಿ ಎ.11 ರಂದು 32 ಸದಸ್ಯಬಲದ ವಿಧಾನಸಭೆಯ ಚುನಾವಣೆಯ ಜೊತೆಗೆ ಲೋಕಸಭಾ ಕ್ಷೇತ್ರದ ಚುನಾವಣೆಯು ಏಕಕಾಲದಲ್ಲಿ ನಡೆಯಲಿದೆ. ಮೇ 23ಕ್ಕೆ ಫಲಿತಾಂಶ ಬಹಿರಂಗವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News