ಟ್ರಂಪ್ ಅಧ್ಯಕ್ಷೀಯ ಪ್ರಚಾರದಲ್ಲಿ ರಷ್ಯಾ ಪಾತ್ರವಿತ್ತು ಎಂಬುದಕ್ಕೆ ಪುರಾವೆಯಿಲ್ಲ: ಮುಲ್ಲರ್ ವರದಿ

Update: 2019-03-25 07:41 GMT

ವಾಷಿಂಗ್ಟನ್, ಮಾ.25: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2016ರ ಅಧ್ಯಕ್ಷೀಯ ಚುನಾವಣೆಯ   ಪ್ರಚಾರಭಿಯಾನವನ್ನು  ಚುನಾವಣೆಯ ಮೇಲೆ ಪ್ರಭಾವ ಬೀರಲು ರಷ್ಯಾ ಜತೆಗೆ ಸಂಘಟಿತವಾಗಿ ನಡೆಸಲಾಗಿತ್ತೆಂಬುದಕ್ಕೆ ಯಾವುದೇ  ಆಧಾರ ದೊರಕಿಲ್ಲ ಎಂದು ವಿಶೇಷ ವಕೀಲ ರಾಬರ್ಟ್ ಮುಲ್ಲರ್ ಅವರ ವರದಿ ತಿಳಿಸಿದೆ. ಆದರೆ ನ್ಯಾಯಯುತ ಚುನಾವಣೆಗೆ ಅಡ್ಡಿ ಪಡಿಸಿದ ಆರೋಪದಿಂದ ಟ್ರಂಪ್ ಅವರನ್ನು ಮುಕ್ತಗೊಳಿಸಲು ಅದು ವಿಫಲವಾಗಿದೆ. ಆದರೆ ಈ ಆರೋಪ ಮುಂದುವರಿಸಿಕೊಂಡು ಹೋಗಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ  ಎಂದು ಅಟಾರ್ನಿ ಜನರಲ್ ವಿಲಿಯಂ ಬರ್ರ್ ರವಿವಾರ ತಿಳಿಸಿದ್ದಾರೆ.

ಮುಲ್ಲೆರ್ ತಮ್ಮ ವರದಿಯಲ್ಲಿ ಅಧ್ಯಕ್ಷರು ಅಪರಾಧವೆಸಗಿದ್ದಾರೆಂದು ಹೇಳಿಲ್ಲದೇ ಇದ್ದರೂ ಅವರನ್ನು ದೋಷಮುಕ್ತಗೊಳಿಸಿಲ್ಲ ಎಂದು ರವಿವಾರ ಅಮೆರಿಕಾ ಕಾಂಗ್ರೆಸ್ ಗೆ ಬರ್ರ್  ಬರೆದಿರುವ ನಾಲ್ಕು ಪುಟಗಳ ಪತ್ರದಲ್ಲಿ ತಿಳಿಸಲಾಗಿದೆ.

ತಾವು ಅಮೆರಿಕಾದ ಅಧ್ಯಕ್ಷರಾದ ನಂತರ ತಮ್ಮ ವಿರುದ್ಧ ಕೇಳಿ ಬಂದ ಎರಡು ಆರೋಪಗಳಿಂದ ಮುಕ್ತಿ ದೊರಕಿದೆ ಎಂದು ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರಾದರೂ  ಈ ವಿಚಾರದಲ್ಲಿ ಟ್ರಂಪ್ ತಪ್ಪಿತಸ್ಥರೇ ಅಥವಾ ನಿರಪರಾಧಿಯೇ ಎಂದು ನಿರ್ಧರಿಸುವ ತಮ್ಮ ಹಕ್ಕನ್ನು ಡೆಮಾಕ್ರೆಟ್ ಗಳು ಪುನರುಚ್ಛರಿಸಿದ್ದಾರೆ.

``ಯಾವುದೇ ಸಂಚಿಲ್ಲ, ಯಾವುದೇ ಅಡ್ಡಿಯಿಲ್ಲ, ಸಂಪೂರ್ಣ ದೋಷಮುಕ್ತಿ'' ಎಂದು ಟ್ರಂಪ್ ವರದಿ ಬಿಡುಗಡೆಯಾದ ಒಂದು ಗಂಟೆಯೊಳಗೆ ಟ್ವೀಟ್ ಮಾಡಿದ್ದಾರೆ.

ಟ್ರಂಪ್ ಅಭಿಯಾನಕ್ಕೆ ಸಹಾಯ ಮಾಡಲು ರಷ್ಯಾ ಸಂಯೋಜಿತ ವ್ಯಕ್ತಿಗಳು ಹಲವಾರು ಆಫರ್ ಮಾಡಿರುವ ಹೊರತಾಗಿಯೂ ಟ್ರಂಪ್ ಪ್ರಚಾರದ ಹೊಣೆ ಹೊತ್ತವರು  ರಷ್ಯಾ ಸರಕಾರದೊಂದಿಗೆ ಈ ನಿಟ್ಟಿನಲ್ಲಿ ಸಹಕರಿಸಿದ್ದಾರೆಂಬುದಕ್ಕೆ  ಪುರಾವೆಯಿಲ್ಲ ಎಂದು ಬರ್ರ್, 2016ರ ರಷ್ಯಾದ ಹ್ಯಾಕಿಂಗ್ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಅತ್ತ ಡೆಮಾಕ್ರೆಟ್ ಸದಸ್ಯರು ಸಂಪೂರ್ಣ ವರದಿ ನೀಡಬೇಕೆಂದು ತಿಳಿಸಿದ್ದು ಈ ನಿಟ್ಟಿನಲ್ಲಿ ತಾವು ತಮ್ಮದೇ ತನಿಖೆ ನಡೆಸಲು ಇದು ಸಹಕಾರಿ ಎನ್ನುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News