ಜಿಲ್ಲಾದ್ಯಂತ 1.65 ಕೋಟಿ ಮೌಲ್ಯದ ಮದ್ಯ ವಶ, 225 ಕೇಸ್ ದಾಖಲು: ಶಿವಮೊಗ್ಗ ಜಿಲ್ಲಾಧಿಕಾರಿ

Update: 2019-03-25 12:52 GMT

ಶಿವಮೊಗ್ಗ, ಮಾ. 25: ಲೋಕಸಭೆ ಚುನಾವಣಾ ನೀತಿ-ಸಂಹಿತೆ ಕಾರ್ಯಗತಗೊಂಡ ನಂತರ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮದ್ಯ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ 225 ಕೇಸ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ. 

ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಒಟ್ಟಾರೆ 36,280 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 1.65 ಕೋಟಿ ರೂ.ಗಳಾಗಿದೆ. ಕಳೆದ ಉಪ ಚುನಾವಣೆ ವೇಳೆ ವಶಕ್ಕೆ ಪಡೆದ ಮದ್ಯದ ಪ್ರಮಾಣ 4500 ಲೀಟರ್ ಆಗಿತ್ತು ಎಂದು ಮಾಹಿತಿ ನೀಡಿದ್ದಾರೆ. 

ಅಕ್ರಮ ಮದ್ಯ ಮಾರಾಟ, ಪೂರೈಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಮದ್ಯ ಮಾರಾಟದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಶಿವಮೊಗ್ಗ ನಗರದ ಕ್ಲಬ್‍ವೊಂದರ ಮ್ಯಾನೇಜರ್ ನನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. 

ಚೆಕ್‍ಪೋಸ್ಟ್ ಗಳಲ್ಲಿ ದಿನದ 24 ಗಂಟೆಯೂ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚೆಗೆ ಸಾಗರ ತಾಲೂಕಿನ ಚೆಕ್‍ಪೋಸ್ಟ್ ವೊಂದರ ಬಳಿ ಪತ್ತೆಯಾದ 2 ಕೋಟಿ ಹಣವು ಬ್ಯಾಂಕ್‍ವೊಂದಕ್ಕೆ ಸೇರಿದ್ದಾಗಿದೆ. ಆದರೆ ಹಣ ಸಾಗಾಣೆಯ ಬಗ್ಗೆ ಸೂಕ್ತ ದಾಖಲಾತಿ ಹೊಂದಿಲ್ಲದಿರುವ ಕುರಿತಂತೆ ಸಂಬಂಧಿಸಿದ ಬ್ಯಾಂಕ್‍ಗೆ ನೋಟೀಸ್ ನೀಡಲಾಗಿದೆ. ಹಾಗೆಯೇ ಆದಾಯ ತೆರಿಗೆ ಇಲಾಖೆಯೂ ಪರಿಶೀಲನೆ ನಡೆಸಿದೆ ಎಂದು ಹೇಳಿದರು. 

ಎಲ್ಲ ಚೆಕ್‍ಪೋಸ್ಟ್ ಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ. ನೇರವಾಗಿ ಮೊಬೈಲ್‍ನಲ್ಲಿ ವೀಕ್ಷಿಸುವ ವ್ಯವಸ್ಥೆಯೂ ಮಾಡಲಾಗಿದೆ. ಇದರಿಂದ ಚೆಕ್‍ಪೋಸ್ಟ್ ಗಳಲ್ಲಿನ ಪ್ರತಿಯೊಂದು ಕಾರ್ಯಚಟುವಟಿಕೆಗಳ ಚಿತ್ರಣ ಲಭ್ಯವಾಗಲಿದೆ. ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಯೇ? ಇಲ್ಲವೇ? ಎಂಬುವುದರ ವಿವರ ಕಲೆ ಹಾಕಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಾಮಪತ್ರ ಸ್ವೀಕಾರಕ್ಕೆ ಸಕಲ ಸಜ್ಜು

ಮಾ. 28 ರಿಂದ ನಾಮಪತ್ರ ಸ್ವೀಕಾರ ಕಾರ್ಯ ನಡೆಯಲಿದ್ದು, ಸಕಲ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿದಂತೆ ಐವರು ಮಾತ್ರ ಹಾಜರಿರಲು ಅವಕಾಶವಿದೆ. ಅಭ್ಯರ್ಥಿಯು ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು. ನಿಗದಿತ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಇತ್ತೀಚೆಗೆ ತೆಗೆದ ಭಾವಚಿತ್ರವನ್ನು ಅರ್ಜಿಯ ಜೊತೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News