ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಧ್ರುವನಾರಾಯಣ್ ನಾಮಪತ್ರ ಸಲ್ಲಿಕೆ

Update: 2019-03-25 13:07 GMT

ಚಾಮರಾಜನಗರ,ಮಾ.25: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಆರ್.ಧ್ರುವನಾರಾಯಣ್ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಮೆರವಣಿಗೆ ನಡೆಸಿ, ನಾಮಪತ್ರ ಸಲ್ಲಿಸಿದರು.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಮೂರನೇ ಬಾರಿಗೆ ಸಂಸದರಾಗಲು ಅದೃಷ್ಟ ಪರಿಕ್ಷೆಗೆ ಇಳಿದಿರುವ ಆರ್.ಧ್ರುವನಾರಾಯಣ್ ಅವರು, ಸಚಿವ ಪುಟ್ಟರಂಗಶೆಟ್ಟಿ, ವರುಣ ಶಾಸಕ ಯತ್ರೀಂದ್ರ ಸಿದ್ದರಾಮಯ್ಯ, ಹೆಚ್.ಡಿ ಕೋಟೆ ಶಾಸಕ ಅನಿಲ್ ಕುಮಾರ್, ಹನೂರು ಶಾಸಕ ಆರ್. ನರೇಂದ್ರ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್ ಬಾಲರಾಜು, ಎಸ್.ಜಯಣ್ಣ ಹಾಗೂ ಅಪಾರ ಕಾರ್ಯಕರ್ತರೊಂದಿಗೆ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ತೆರಳಿದರು.

ಈ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಆರ್.ಧ್ರುವನಾರಾಯಣ್, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮತದಾರರು ಎರಡು ಭಾರಿ ಸಂಸದನಾಗಿ ಆಯ್ಕೆಯಾಗಲು ಅವಕಾಶ ನೀಡಿದ್ದಾರೆ. ಆಯ್ಕೆಯಾದ ಬಳಿಕ ಜನ ಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಭಾರಿ ಮೂರನೇ ಬಾರಿಗೆ ಸಂಸದನಾಗಲು ಮತ್ತೊಮ್ಮೆ ಸ್ಪರ್ಧೆ ಮಾಡಿದ್ದೇ. ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಬಳಿಕ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಜಾನಪದ ಕಲಾತಂಡದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ದಳಪತಿಗಳ ಗೈರು

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಆರ್.ಧ್ರುವನಾರಾಯಣ್ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಜೆಡಿಎಸ್ ಮುಖಂಡರ ಗೈರು ಎದ್ದು ಕಾಣುತ್ತಿತ್ತು.

ಜೆಡಿಎಸ್ ಕಾರ್ಯಕರ್ತರೊಂದಿಗೆ ಸಂಸದ ಆರ್.ಧ್ರುವನಾರಾಯಣ್ ಸಮಾಲೋಚನೆ ನಡೆಸಿಲ್ಲ ಹಾಗೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ಆರೋಪಕ್ಕೆ ಇಂದಿನ ಜೆಡಿಎಸ್ ಮುಖಂಡರ ಗೈರು ಪುಷ್ಠಿ ನೀಡುತ್ತಿತ್ತು.

ಈ ಬಗ್ಗೆ ಆರ್.ಧ್ರುವನಾರಾಯಣ್ ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್ ಮುಖಂಡರು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರಲು ಹೋಗಿದ್ದಾರೆ. ಪ್ರಚಾರದ ವೇಳೆ ದಳಪತಿಗಳು ಭಾಗವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News