ನಾಮಪತ್ರ ಸಲ್ಲಿಕೆ ದಿನವೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು

Update: 2019-03-25 14:02 GMT

ಮೈಸೂರು,ಮಾ.25: ಸಂಸದ ಪ್ರತಾಪ್ ಸಿಂಹ ನೀತಿ ಸಂಹಿತೆ ಜಾರಿಯಲ್ಲಿದ್ದರೂ ತಮ್ಮ ಕ್ಷೇತ್ರ ಮತ್ತು ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ ಬುಕ್ ಲೆಟ್ ಗಳನ್ನು ಅಂಚೆ ಇಲಾಖೆ ಮೂಲಕ ವಿತರಣೆ ಮಾಡಿಸಿದ್ದಾರೆ ಎಂದು ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ದೂರು ದಾಖಲಿಸಿದ್ದು, ತಮ್ಮ ದೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಂಸದ ಪ್ರತಾಪ್ ಸಿಂಹ ತಮ್ಮ ಪಕ್ಷದ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ಬುಕ್ ಲೆಟ್ ಗಳನ್ನು ಸರ್ಕಾರದ ಅಂಚೆ ಇಲಾಖೆ ಮೂಲಕ ವಿತರಣೆ ಮಾಡಿಸಿದ್ದಾರೆ. ಈ ಸಂಬಂಧ ಮಾ.14 ರಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ದೂರನ್ನು ಜಿಲ್ಲಾಧಿಕಾರಿ ಪರಿಶೀಲಿಸಿದಾಗ, ಸಂಸದರು ಅಂಚೆ ಇಲಾಖೆ ಮೂಲಕ ಹಂಚಿಕೆ ಮಾಡಿಸಿರುವ ಪ್ರಚಾರ ಪುಸ್ತಕಗಳಲ್ಲಿ ಪ್ರಕಟಣೆದಾರರ ಮತ್ತು ಮುದ್ರಕರ ಹೆಸರು ಇಲ್ಲದಿರುವುದು ಕಂಡು ಬಂದಿದೆ. ಆದ್ದರಿಂದ ಅದು ಪ್ರಜಾಪ್ರತಿನಿದಿ ಕಾಯ್ದೆ ಕಲಂ (127) ಎ ಅನ್ನು ಉಲ್ಲಂಘಿಸಿದಂತಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಚುನಾಣಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಅದರಂತೆ ಚಾಮರಾಜ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ಉಮೇಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಠಾಣಾ ಎನ್.ಸಿ.ಆರ್ 166 / 2019 ರಂತೆ ಠಾಣಾ ಮೊ.ನಂ.27/2019 ಕಲಂ (127)ಎ ಪ್ರಜಾಪ್ರತಿನಿದಿ ಕಾಯ್ದೆ ಪ್ರಕಾರ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News