ತುಮಕೂರು: ದೇವೇಗೌಡ, ಇಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Update: 2019-03-25 14:37 GMT

ತುಮಕೂರು.ಮಾ.25: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೋಮವಾರ ಮಧ್ಯಾಹ್ನ 2.15ಕ್ಕೆ ಜಿಲ್ಲಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸುವ ಮೂಲಕ ಮೈತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಜೊತೆಗೆ, ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಟ್ಟಿರುವುದನ್ನು ವಿರೋಧಿಸಿ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಸೀಟು ಹಂಚಿಕೆಯಲ್ಲಿ ತುಮಕೂರು ಕ್ಷೇತ್ರ ಜೆಡಿಎಸ್ ವಶವಾದ್ದರಿಂದ ಭುಗಿಲೆದ್ದ ಅಸಮಾಧಾನವನ್ನು ಸರಿಪಡಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಪಿ.ಮುದ್ದಹನುಮೇಗೌಡ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸದ ನಂತರ ಟೌನ್‍ಹಾಲ್ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೆಂಬಲಿಗರೊಂದಿಗೆ ರ‍್ಯಾಲಿ ನಡೆಸಿ, ಮಧ್ಯಾಹ್ನ 12 ಗಂಟೆಯ ನಂತರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಮತದಾರರು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಅರಿತುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನನಗೆ ಬಿ ಫಾರ್ಮ್ ನೀಡುತ್ತಾರೆ ಎನ್ನುವ ವಿಶ್ವಾಸವಿದ್ದು, 2ನೇ ಬಾರಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ, ಸಾಸಲು ಸತೀಶ್, ರಾಯಸಂದ್ರ ರವಿಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ರ‍್ಯಾಲಿಯಲ್ಲಿ ಗೋಬ್ಯಾಕ್ ಘೋಷಣೆ: ನಗರ ಟೌನ್‍ಹಾಲ್ ಸರ್ಕಲ್‍ನಿಂದ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿದ ಮುದ್ದಹನುಮೇಗೌಡ ಅವರ ಬೆಂಬಲಿಗರು ಗೋ ಬ್ಯಾಕ್ ದೇವೇಗೌಡ ಘೋಷಣೆ ಕೂಗುವ ಮೂಲಕ ಮೈತ್ರಿ ಅಭ್ಯರ್ಥಿಗೆ ವಿರೋಧವನ್ನು ವ್ಯಕ್ತಪಡಿಸಿದರು.

ನಾಮಪತ್ರ ಸಲ್ಲಿಸಿದ ರಾಜಣ್ಣ: ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಟ್ಟರೆ ನಾನು ಬಂಡಾಯ ಸ್ಪರ್ಧಿಸುವುದಾಗಿ ಹೈಕಮಾಂಡ್‍ಗೆ ತಿಳಿಸಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ಸಂಸದ ಮುದ್ದಹನುಮೇಗೌಡ ಅವರು ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಮುದ್ದಹನುಮೇಗೌಡರಿಗೆ ಬೆಂಬಲ ವ್ಯಕ್ತಪಡಿಸಿದ್ದ ರಾಜಣ್ಣ ಅವರು, ಸೋಮವಾರ ಮುದ್ದಹನುಮೇಗೌಡ ನಾಮಪತ್ರ ಸಲ್ಲಿಸಿದ ನಂತರ ತಾವು ನಾಮಪತ್ರ ಸಲ್ಲಿಸಿದ್ದು, ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಮುದ್ದಹನುಮೇಗೌಡ ಅವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಿದ್ದ ಕೆ.ಎನ್.ರಾಜಣ್ಣ ಅವರು ದಿಢೀರನೇ ನಾಮಪತ್ರವನ್ನು ಸಲ್ಲಿಸಿದ್ದು, ಮೈತ್ರಿಯಲ್ಲಿ ಬಂಡಾಯದ ಅಸಮಾಧಾನ ಸದ್ಯಕ್ಕೆ ತಣ್ಣಾಗಾಗುವಂತೆ ಕಾಣುತ್ತಿಲ್ಲ. ಒಂದು ವೇಳೆ ಮುದ್ದಹನುಮೇಗೌಡ ನಾಮಪತ್ರವನ್ನು ಹಿಂಪಡೆದರೂ ಚುನಾವಣೆಯಿಂದ ಹಿಂದೆ ಸರಿಯದೇ ಇರಲು ಕೆ.ಎನ್.ರಾಜಣ್ಣ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ದೇಗುಲಕ್ಕೆ ಭೇಟಿ ನೀಡಿದ ದೇವೇಗೌಡ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನಾಮಪತ್ರ ಸಲ್ಲಿಸುವ ಮೊದಲು ಆರ್‍ಟಿಒ ಕಚೇರಿ ಆವರಣದಲ್ಲಿರುವ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮೈತ್ರಿ ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್ ಶೋ ನಡೆಸಿದ ದೇವೇಗೌಡರು ನಿಗದಿತ ಮಹೂರ್ತದಲ್ಲಿ ನಾಮಪತ್ರ ಸಲ್ಲಿಸುವುದಕ್ಕಾಗಿ ರೋಡ್ ಶೋ ಮಧ್ಯೆಯಲ್ಲಿಯೇ ತೆರದ ವಾಹನವನ್ನು ಬಿಟ್ಟು ಕಾರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯತ್ತ ತೆರಳಿದರು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ಡಿಸಿಎಂ ಪರಮೇಶ್ವರ್, ಮಾಜಿ ಶಾಸಕರಾದ ಷಡಕ್ಷರಿ, ರಫೀಕ್ ಅಹ್ಮದ್, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್‍ಬಾಬು ಅವರೊಂದಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News