ರಾಹುಲ್, ಮಮತಾ ಬ್ಯಾನರ್ಜಿ ಒತ್ತಾಯಕ್ಕೆ ಚುನಾವಣೆಯಲ್ಲಿ ಸ್ಪರ್ಧೆ: ಹೆಚ್.ಡಿ.ದೇವೇಗೌಡ

Update: 2019-03-25 14:44 GMT

ತುಮಕೂರು.ಮಾ.25: ರಾಹುಲ್ ಗಾಂಧಿ, ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ಗುಲಾಂ ನಬಿ ಆಝಾದ್ ಮುಂತಾದ ನಾಯಕರು ಲೋಕಸಭೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 29 ವರ್ಷಗಳಿಂದ ಸಂಸದನಾಗಿ ಕೆಲಸ ಮಾಡಿದ್ದೇನೆ, ಚುನಾವಣೆಗೆ ನಿಲ್ಲುವುದು ಬೇಡ ಎಂದು ಕ್ಷೇತ್ರವನ್ನು ಪ್ರಜ್ವಲ್‍ಗೆ ರೇವಣ್ಣನಿಗೆ ಬಿಟ್ಟೆ. ಆದರೆ ಎಲ್ಲ ಮುಖಂಡರು ಸ್ಪರ್ಧಿಸುವಂತೆ ಒತ್ತಾಯಿಸಿದರು. ಮುಖಂಡರ ಸಲಹೆ ಮೇರೆಗೆ ತುಮಕೂರಿನಿಂದ ಸ್ಪರ್ಧಿಸಲು ಮುಂದಾದೆ ಎಂದರು.

ನಮ್ಮ ಬಳಿ ಕೇವಲ 37 ಸೀಟುಗಳಿದ್ದರೂ ಕಾಂಗ್ರೆಸ್ ನಮಗೆ ಮುಖ್ಯಮಂತ್ರಿ ಹುದ್ದೆ ನೀಡಿತು. ಸೋನಿಯಾ ಮತ್ತು ರಾಹುಲ್ ಗಾಂಧಿ ನಮಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾದ ನೈತಿಕತೆ ಪಕ್ಷಕ್ಕಿದೆ. ಎಲ್ಲಾ ರಾಜ್ಯಗಳಲ್ಲಿಯೂ ಪ್ರಚಾರ ಮಾಡುವೆ. ಚಂದ್ರಬಾಬು ನಾಯ್ಡು ಅವರು ಪ್ರಚಾರಕ್ಕೆ ಆಹ್ವಾನಿಸಿದ್ದಾರೆ ಎಂದು ದೇವೇಗೌಡರು ಹೇಳಿದರು.

ತುಮಕೂರಿನಿಂದ ಸ್ಪರ್ಧಿಸುವ ನಿರ್ಧಾರ ಮಾಡಿದಾಗಲೇ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಅಪಮಾನವಾಗಲಿದೆ ಎಂಬುದು ತಿಳಿದಿತ್ತು. ನಾನು ಅವರಿಗೆ ಅಪಮಾನ ಮಾಡಲು ಬಯಸುವುದಿಲ್ಲ. ಕಾಂಗ್ರೆಸ್ ನಾಯಕರು ಅವರಿಗೆ ಎಲ್ಲವನ್ನು ಹೇಳಿದ್ದಾರೆ ಎಂದು ದೇವೇಗೌಡರು ತಿಳಿಸಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ತುಮಕೂರಿಗೆ ಇದೊಂದು ಐತಿಹಾಸಿಕ ದಿನವಾಗಿದೆ. ದೇಶದ ಹಿರಿಯ ನಾಯಕ, ಕನ್ನಡಿಗರನ್ನು ಹೆಮ್ಮೆ ಪಡುವಂತೆ ಮಾಡಿರುವ ಎಚ್.ಡಿ.ದೇವೇಗೌಡರು ಇಲ್ಲಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಹೇಳಿದರು.

'ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಿ ಎಂದು ರಾಹುಲ್ ಗಾಂಧಿ ಅವರು ಸಲಹೆ ನೀಡಿದರು. ದೇವೇಗೌಡರು ಇಲ್ಲಿಂದ ಕಣಕ್ಕಿಳಿಯಲಿದ್ದಾರೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ನನಗೆ ತುಮಕೂರಿನ ಜನರ ಮೇಲೆ ಭರವಸೆ ಇದೆ’ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕರಾದ ಕೆ.ಷಡಕ್ಷರಿ, ಶಫೀ ಅಹ್ಮದ್, ರಫೀಕ್ ಅಹ್ಮದ್, ನಾಗರಾಜಯ್ಯ ಸೇರಿದಂತೆ ಜೆಡಿಎಸ್-ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News