ಎಸೆಸೆಲ್ಸಿ ಪ್ರಶ್ನೆಪತ್ರಿಕೆ ಅಕ್ರಮಕ್ಕೆ ಯತ್ನಿಸಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ದೇಶನ

Update: 2019-03-25 17:00 GMT

ಬೆಂಗಳೂರು, ಮಾ.25: ಸೋಮವಾರ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರದಿಂದಲೇ ಪ್ರಶ್ನೆಪತ್ರಿಕೆ ಅಕ್ರಮ ನಡೆಸಿರುವ ಘಟನೆಗಳು ವರದಿಯಾಗಿದ್ದು, ಅಕ್ರಮಕ್ಕೆ ಯತ್ನಿಸಿದವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಪರೀಕ್ಷೆಯಲ್ಲಿ ಅಕ್ರಮಕ್ಕೆ ಪ್ರಯತ್ನಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ, ಅಕ್ರಮಕ್ಕೆ ಪ್ರಯತ್ನಿಸಿದ ಶಿಕ್ಷಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಾಗೂ ಇದಕ್ಕೆ ಸಹಕರಿಸಿದ ಕೊಠಡಿ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಅಮಾನತು ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ರಾಯಭಾಗ ತಾಲೂಕಿನ ಹಾರೂಗೇರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಉತ್ತರಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಂದ ನಕಲು ಮಾಡಿಸಲು ಪ್ರಯತ್ನಿಸುತ್ತಿದ್ದರು ಎಂಬ ಆರೋಪದ ಮೇಲೆ ಅಲಕನೂರ ಸರಕಾರಿ ಪ್ರೌಢಶಾಲೆ ಶಿಕ್ಷಕರಾದ ಎ.ಬಿ. ಪಾಟೀಲ, ಡಿ.ಪಿ. ಕಾಪ್ಸಿ ಮತ್ತು ಪಾಲಯ್ಯ ಅವರ ಮೇಲೆ ಶಿಕ್ಷಣ ಕಾಯ್ದೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಇದಕ್ಕೆ ಸಹಕಾರ ನೀಡಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರನ್ನು ಅಮಾನತುಗೊಳಿಸುವಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.

ಮೈಸೂರಿನಲ್ಲಿ ವಿದ್ಯಾರ್ಥಿ ಡಿಬಾರ್: ಮೈಸೂರಿನ ಒಂಟಿಕೊಪ್ಪಲು ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರದೊಳಗೆ ನಕಲಿಗೆ ಪ್ರಯತ್ನಿಸಿದ ಮುಜಾಹಿದ್ದೀನ್ ಪಾಷಾ ಎಂಬ ಖಾಸಗಿ ಅಭ್ಯರ್ಥಿಯನ್ನು ಡಿಬಾರ್ ಮಾಡಲಾಗಿದೆ. ಸಮೀಪದ ಜಯಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಳಗ್ಗೆ 9.30ಕ್ಕೆ ಪರೀಕ್ಷೆ ಆರಂಭಕ್ಕೂ ಮುನ್ನ ಕೊಠಡಿ ಮೇಲ್ವಿಚಾರಕರು ಎಲ್ಲ ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಈ ವಿದ್ಯಾರ್ಥಿಯು ಒಳ ಉಡುಪಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದಾನೆ. ನಂತರ 11.15ರ ಸುಮಾರಿಗೆ ಮೊಬೈಲ್ ಜೇಬಿನಿಂದ ಕೆಳಗೆ ಬಿದ್ದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯು 10 ಗಂಟೆ ಸುಮಾರಿಗೆ ಫೋಟೋ ತೆಗೆದು ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ಫೋಟೋ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಫೋಟೋ ತೆಗೆದ ಬಳಿಕ ಯಾರು ಯಾರಿಗೆ ಪ್ರಶ್ನೆಪತ್ರಿಕೆ ಕಳಿಸಿದ್ದಾರೆ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೈಸೂರು ನಗರ ಉತ್ತರ ತಾಲೂಕಿನ ಬಿಇಒ ಡಿ. ಉದಯಕುಮಾರ್ ತಿಳಿಸಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೊರಟಗಿ ಕಲ್ಪವೃಕ್ಷ ಪ್ರೌಢಶಾಲೆಯಲ್ಲಿ ಸೋಮವಾರ ಬೆಳಗ್ಗೆ 11.45ರ ಸುಮಾರಿಗೆ ವಾಟ್ಸ್ ಆ್ಯಪ್‌ನಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಹರಿದಾಡಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದರೂ ಕೆಲವು ಕಿಡಿಗೇಡಿಗಳು ಗೊಂದಲ ಸೃಷ್ಟಿಸುವುದಕ್ಕಾಗಿಯೇ ಪರೀಕ್ಷಾ ವ್ಯವಸ್ಥೆಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಬಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News