ಕಳಸ: ಮನೆಯ ಟೆರೇಸ್ ಮೇಲೆ ಸ್ಫೋಟಕ ವಸ್ತುಗಳು ಪತ್ತೆ; ವ್ಯಾಪಾರಿ ಬಂಧನ

Update: 2019-03-26 14:43 GMT

ಚಿಕ್ಕಮಗಳೂರು, ಮಾ.26: ಮನೆಯ ಟೆರೆಸ್ ಮೇಲೆ ಕಲ್ಲು ಸ್ಫೋಟಿಸುವ ಹಾಗೂ ಮೀನು ಹಿಡಿಯಲು ಬಳಸುವ ಸ್ಫೋಟಕ ಸಾಮಗ್ರಿಗಳನ್ನು ಹೊಂದಿದ್ದ ಆರೋಪದಡಿ ವ್ಯಕ್ತಿಯೊಬ್ಬರನ್ನು ಕಳಸ ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ಮಂಗಳವಾರ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಕಳಸ ಪಟ್ಟಣದ ನಿವಾಸಿ ಅಝೀಝ್ (39) ಎಂದು ಗುರುತಿಸಲಾಗಿದ್ದು, ಇವರು ಕಳಸ ಪಟ್ಟಣದಲ್ಲಿ ಕಳೆದ ಎರಡು ದಶಕಗಳಿಂದ ಅಡಿಕೆ, ಕಾಫಿ, ಕಾಳುಮೆಣಸು ವ್ಯಾಪಾರ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ 11ರ ವೇಳೆ ಖಚಿತ ಮಾಹಿತಿ ಮೇರೆಗೆ ಕಳಸ ಪೊಲೀಸ್ ಠಾಣೆಯ ಪೊಲೀಸರು ಪಟ್ಟಣದ ಗೋರಿಮಕ್ಕಿ ಬಡಾವಣೆಯಲ್ಲಿರುವ ಅಝೀಝ್ ಅವರ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಈ ವೇಳೆ ಮನೆಯ ಟೆರೆಸ್ ಮೇಲೆ 14 ಜಿಲೆಟಿನ್ ಕಡ್ಡಿಗಳು ಹಾಗೂ 40 ಡಿಟೋನೇಟರ್ ಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಅಝೀಝ್ ಅವರನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಆರೋಪಿ ಅಝೀಝ್ ಅವರನ್ನು ವಶಕ್ಕೆ ಪಡೆದ ಕಳಸ ಪೊಲೀಸರು ಆರಂಭದಲ್ಲಿ ಕಳಸ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ್ದರು. ನಂತರ ಠಾಣೆ ಎದುರು ಹೆಚ್ಚಿನ ಜನ ಜಮಾಯಿದ್ದ ಪರಿಣಾಮ ಆರೋಪಿಯನ್ನು ಕುದುರೆಮುಖ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದರೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ ಮಂಗಳವಾರ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ ಅವರು ನಂತರ ಕುದುರೆಮುಖ ಠಾಣೆಗೆ ತೆರಳಿದರು. 

ಕಳೆದ ಫೆಬ್ರವರಿ ತಿಂಗಳಲ್ಲಿ ಕಳಸ ಹೋಬಳಿ ವ್ಯಾಪ್ತಿಯಲ್ಲಿರುವ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಸ್ರಿಕಲ್ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ್ದ ತನಿಖಾ ಠಾಣೆಯ ಮೇಲೆ ಕಿಡಿಗೇಡಿಗಳು ಎರಡು ಪೆಟ್ರೋಲ್ ಬಾಂಬ್‍ಗಳನ್ನು ಎಸೆದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಘಟನೆಯಲ್ಲಿ ತನಿಖಾ ಠಾಣೆ ಭಾಗಶಃ ಬೆಂಕಿಯಿಂದ ಹಾನಿಗೊಳಗಾಗಿತ್ತು. ಆರಂಭದಲ್ಲಿ ಈ ಘಟನೆ ನಕ್ಸಲರ ಕೃತ್ಯ ಇರಬಹುದೇನೋ ಎಂದು ಶಂಕಿಸಿದ್ದ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದರು. ಬಳಿಕ ಈ ಘಟನೆಯಲ್ಲಿ ನಕ್ಸಲರ ಪಾತ್ರ ಇಲ್ಲ ಎಂಬುದನ್ನು ಸ್ವತಃ ಎಸ್ಪಿ ಹರೀಶ್ ಪಾಂಡೆ ಸ್ಪಷ್ಟಪಡಿಸಿದ್ದು, ಘಟನೆಯಲ್ಲಿ ಸ್ಥಳೀಯರ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತ ಪಡಿಸಿ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಬಂಧಿತ ಅಝೀಝ್‍ಗೂ ಚೆಕ್‍ಪೋಸ್ಟ್ ಘಟನೆಗೂ ಸಂಬಂಧ ಇರುವ ಬಗ್ಗೆ ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಏಳಿಗೆ ಸಹಿಸದವರ ಸಂಚು: 
ಅಝೀಝ್ ಅವರು ಕಾಫಿ, ಅಡಿಕೆ ವ್ಯಾಪಾರದೊಂದಿಗೆ ರಿಯಲ್ ಎಸ್ಟೇಟ್ ವ್ಯಾಪಾರವನ್ನೂ ಆರಂಭವನ್ನೂ ಮಾಡುತ್ತಿದ್ದರು. ಅವರ ಬೆಳವಣಿಗೆಯನ್ನು ಸಹಿಸದವರೇ ಸಂಚು ರೂಪಿಸಿ ಹೀಗೆ ಮಾಡಿದ್ದಾರೆ. ಅಝೀಝ್ ಮನೆ ಕುದುರೆಮುಖ ರಸ್ತೆಗೆ ಹೊಂದಿಕೊಂಡಿದ್ದು, ಮನೆಯ ಟೆರೆಸ್ ಮೇಲೆ ಯಾರೂ ಬೇಕಾದರೂ ರಾತ್ರಿ ವೇಳೆ ಹೋಗಿಬರಬಹುದು. ಇದನ್ನು ದುರುಪಯೋಗಪಡಿಸಿಕೊಂಡ ಪಟ್ಟಣದ ಕೆಲ ವ್ಯಾಪಾರಿಗಳು ವೈಯಕ್ತಿಕ ಧ್ವೇಷದಿಂದ ಸ್ಫೋಟಕಗಳನ್ನು ಮನೆಯ ಟೆರೇಸ್ ಮೇಲೆ ತಂದಿಟ್ಟಿದ್ದಾರೆ. ಅವರ ಹೆಸರು ಕೆಡಿಸಲು ಕೆಲವರು ಸಂಚು ಮಾಡಿ ಈ ಆರೋಪ ಹೊರಿಸಿದ್ದಾರೆ. ಅಝೀಝ್ ಅವರಿಗೆ ವ್ಯಾಪಾರ ಬಿಟ್ಟು ಬೇರೆ ಯಾವ ವಿಧ್ವಂಸಕ ಕೃತ್ಯ ನಡೆಸುವ ಮನಸ್ಥಿತಿಯವರಲ್ಲ. ಇಂತಹ ಚಟುವಟಿಕೆ ನಡೆಸುವವರಾಗಿದ್ದಾರೆ. ಸ್ಫೋಟಕಗಳನ್ನು ಟೆರೆಸ್ ಮೇಲೆ ಎಲ್ಲರಿಗೂ ಕಾಣುವಂತೆ ಇಡುತ್ತಿರಲಿಲ್ಲ. ಪೊಲೀಸರು ಸೂಕ್ತ ತನಿಖೆನಡೆಸಿದಲ್ಲಿ ಸಂಚು ರೂಪಿಸಿದ ಆರೋಪಿಗಳು ಸಿಕ್ಕಿ ಬೀಳುತ್ತಾರೆ. ಪೊಲೀಸರ ತನಿಖೆಗೆ ನಾವು ಸಹಕಾರ ನೀಡುತ್ತೇವೆ.

-ಸಮೀರ್, ಬಂಧಿತ ಅಝೀಝ್ ಸಹೋದರ

ಪಟ್ಟಣ ವಾಸಿಗಳು ಹೇಳುವುದೇನು?
ಕಳೆದ ಎರಡು ದಶಕಗಳಿಂದ ಕಳಸ ಪಟ್ಟಣದಲ್ಲಿ ಅಡಿಕೆ, ಕಾಫಿ, ಕಾಳು ಮೆಣಸು ಮತ್ತಿತರ ವಾಣಿಜ್ಯ ಬೆಳೆಗಾರ ಮಂಡಿ ನಡೆಸುತ್ತಾ ಇಡೀ ಕಳಸ ಹೋಬಳಿ ಜನರಿಗೆ ಚಿರಪರಿಚಿತರಾಗಿದ್ದ ಅಝೀಝ್ ಅವರ ಬಗ್ಗೆ ಕಳಸ ಪಟ್ಟಣದ ನಿವಾಸಿಗಳಲ್ಲು ಉತ್ತಮ ಅಭಿಪ್ರಾಯವಿದೆ. ಕಳೆದ 20 ವರ್ಷಗಳಿಂದ ಪಟ್ಟದಲ್ಲಿ ವ್ಯಾಪಾರ ಮಾಡುತ್ತಿರುವ ಅಝೀಝ್ ಸ್ನೇಹ ಸ್ವಭಾವದವರು. ಜಗಳಗಂಟನಲ್ಲ. ವ್ಯವಹಾರದ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆಯೇ ಹೊರತು, ವಿಧ್ವಂಸಕ ಕೃತ್ಯ ಸಂಬಂಧ ಇದುವರೆಗೂ ಅವರ ಮೇಲೆ ಯಾವ ಆರೋಪವೂ ಇಲ್ಲ. ಮಂಗಳವಾರ ಅವರ ಮನೆಯಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿರುವುದು ನಂಬಲಾಗುತ್ತಿಲ್ಲ ಎಂದು ಪಟ್ಟಣದ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಚ್ಚಿಬಿದ್ದ ಕಳಸ ಪಟ್ಟಣ ನಿವಾಸಿಗಳು: 

ಮಂಗಳವಾರ ಕಳಸ ಪಟ್ಟಣದ ಮನೆಯೊಂದರಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕಳಸ ಹೋಬಳಿಯ ಜನತೆ ಬೆಚ್ಚಿಬಿದ್ದಾರೆ. ಕಳಸ ಹೋಬಳಿ ನಕ್ಸಲ್ ಪೀಡತ ಗ್ರಾಮಗಳನ್ನು ಹೊಂದಿರುವ ಪ್ರದೇಶವಾಗಿದೆ, ಹೋಬಳಿ ವ್ಯಾಪ್ತಿಯಲ್ಲಿ ಈ ಹಿಂದೆ ಒಂದೆರೆಡು ಎನ್‍ಕೌಂಟರ್ ಗಳಲ್ಲಿ ಕೆಲ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ನಕ್ಸಲರೊಂದಿಗೆ ಪೊಲೀಸರ ಗುಂಡಿನ ಚಕಮಕಿ ನಡೆದಿರುವ ಘಟನೆ ಹೊರತು ಪಡಿಸಿ ಮನೆಯೊಂದರಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟ ಘಟನೆ ಇದೇ ಪ್ರಥಮ ಬಾರಿಗೆ ಬೆಳಕಿಗೆ ಬಂದಿದೆ. ಕಳಸ ಪಟ್ಟಣ ಹಿಂದು ಮುಸ್ಲಿಮರ ನಡುವಿನ ಸಾಮರಸ್ಯ ಸೌಹಾರ್ದಕ್ಕೆ ಹೆಸರಾಗಿದ್ದು, ಈ ಹಿಂದೆ ಸಾಮರಸ್ಯ ಕದಡುವಂತಹ ಅಥವಾ ಭಯೋತ್ಪಾದಕ ಚಟುವಟಿಕೆಗಳಂತಹ ಒಂದೇ ಒಂದು ಪ್ರಕರಣದ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸ್ಫೋಟಕಗಳು ಮನೆಯೊಂದರಲ್ಲಿ ಪೊಲೀಸರಿಗೆ ಸಿಕ್ಕಿದ ಸುದ್ದಿಯಿಂದಾಗಿ ಕಳಸ ಹೋಬಳಿಯ ಜನತೆ ಆಶ್ಚರ್ಯಕ್ಕೊಳಗಾಗಿದ್ದು, ಸುದ್ದಿಯಿಂದ ಬೆಚ್ಚಿಬಿದ್ದಿದ್ದಾರೆಂದು ತಿಳಿದು ಬಂದಿದೆ.

ಪೊಲೀಸರು ಅಝೀಝ್ ಅವರ ಮನೆ ಮೇಲೆ ದಾಳಿ ಮಾಡಿದ ಸುದ್ದಿ ತಿಳಿದ ಕೆಲ ಕಿಡಿಗೇಡಿಗಳು ಆರೋಪಿ ಮನೆಯಲ್ಲಿ ಪೆಟ್ರೋಲ್ ಬಾಂಬ್ ಪತ್ತೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇನ್ನು ಕೆಲವರು ಅಝೀಝ್ ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದ, ಚುನಾವಣೆ ಸಂದರ್ಭ ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದ ಎಂದು ಸುಳ್ಳು ಸುದ್ದಿ ಹರಡಿಸಿದ್ದರು. ಕೆಲ ದೃಶ್ಯ ಮಾಧ್ಯಮಗಳಲ್ಲೂ ಇದು ಬ್ರೇಕಿಂಗ್ ನ್ಯೂಸ್ ಆಗಿದ್ದರಿಂದ ಜಿಲ್ಲಾದ್ಯಂತ ಈ ವಿಷಯ ಎಲ್ಲೆಡೆ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಅಝೀಝ್ ಪರಿಚಿತರು, ಸ್ನೇಹಿತರು, ಕುಟುಂಬದವರು ಈ ಬಗ್ಗೆ ತೀವ್ರ ಆತಂಕಕ್ಕೊಳಗಾಗಿದ್ದರು. ಆದರೆ ಎಸ್ಪಿ ಹರೀಶ್ ಪಾಂಡೆ ಪತ್ರಿಕಾ ಪ್ರಕಟನೆ ನೀಡಿ ಪೆಟ್ರೋಲ್ ಬಾಂಬ್, ನಕ್ಸಲರು, ಭಯೋತ್ಪಾದಕರ ನಂಟಿನ ಬಗ್ಗೆ ಸ್ಪಷ್ಟನೆ ನೀಡಿದ್ದರಿಂದ ಅಝೀಝ್ ಕುಟುಂಬದವರು, ಪಟ್ಟಣದ ನಾಗರಿಕರು ನಿಟ್ಟುಸಿರು ಬಿಡುವಂತಾಯಿತು.

ಸ್ಫೋಟಕಗಳನ್ನು ಮೆನಯಲ್ಲಿ ಹೊಂದಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಳಸ ಪಟ್ಟಣದಲ್ಲಿ ಮನೆಯೊಂದನ್ನು ಪೊಲೀಸರು ಮಂಗಳವಾರ ಬೆಳಗ್ಗೆ ಶೋಧಿಸಿದ್ದಾರೆ. ಈ ವೇಳೆ ಪಟ್ಟಣದ ವ್ಯಾಪಾರಿ ಅಝೀಝ್ ಎಂಬವರ ಮನೆಯಲ್ಲಿ 14 ಜಿಲೆಟಿನ್ ಕಡ್ಡಿಗಳು 40 ಡಿಟೊನೇಟರ್ ಗಳೊಂದಿಗೆ ಪ್ಯೂಸ್‍ಗಳು ಪೊಲೀಸರಿಗೆ ಸಿಕ್ಕಿವೆ. ಪೊಲೀಸರು ಅವುಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಅಝೀಝ್ ಅವರು ಕಳಸ ಪಟ್ಟಣದಲ್ಲಿ ಚಿರಪರಿಚಿತ ವ್ಯಾಪಾರಿಯಾಗಿದ್ದಾರೆ. ಅವರು ಯಾವುದೇ ಹಿಂಸಾಕೃತ್ಯ ಎಸಗುವ ಗುಂಪಿನೊಂದಿಗೆ ಸಂಬಂಧ ಹೊಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿ ಮನೆಯಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳು ಕಲ್ಲು ಕ್ವಾರಿಗಳಲ್ಲಿ ಬಳಸುವ ಸ್ಫೋಟಕಗಳಾಗಿವೆ. ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ವಸ್ತುಗಳನ್ನು ಆರೋಪಿ ಯಾವ ಉದ್ದೇಶಕ್ಕೆ ಸಂಗ್ರಹಿಸಿದ್ದ ಅಥವಾ ಬೇರೆ ಯಾರಾದರೂ ಧ್ವೇಷ ಸಾಧಿಸುವ ಸಲುವಾಗಿ ತಂದಿಟ್ಟಿದ್ದರೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ.
- ಹರೀಶ್ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News