‘ಕೈ’ ಮುಖಂಡರ ಆಶೀರ್ವಾದ ಪಡೆದ ಪ್ರಜ್ವಲ್ ರೇವಣ್ಣ

Update: 2019-03-26 14:57 GMT

ಬೆಂಗಳೂರು, ಮಾ. 26: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಮಂಗಳವಾರ ಇಲ್ಲಿನ ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ನಾವು ಸಣ್ಣವರಿದ್ದಾಗಿಂದಲೂ ಸಿದ್ದರಾಮಯ್ಯನವರನ್ನು ನೋಡಿಕೊಂಡು ಬೆಳೆದವರು. ನಮ್ಮ ಮನೆಯವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಡೂರು, ಅರಕಲಗೂಡು, ಅರಸಿಕೆರೆ ಹಾಗೂ ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದ ಅವರು, ಮಾಜಿ ಸಚಿವ ಎ.ಮಂಜು ಬಗ್ಗೆ ನನಗೆ ಯಾವುದೇ ಭಯ ಇಲ್ಲ. ನಾನು ಯಾವತ್ತೂ ಎ.ಮಂಜು ವಿರುದ್ಧ ಮಾತನಾಡಿಲ್ಲ. ನಾನು ಯಾವುದೇ ಕಾರಣಕ್ಕೂ ಟೀಕೆಯ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದುಡ್ಡು ಕೊಟ್ಟು ಜನ ಸೇರಿಸುವುದು ದೊಡ್ಡದಲ್ಲ. ಹಾಗೇನಾದರೂ ದುಡ್ಡು ಕೊಟ್ಟರೆ ನಾವು ಹಾಸನ ಜಿಲ್ಲೆ ತುಂಬಾ ಜನ ಸೇರಿಸ್ತೇವೆ. ನಾನು ಈಗ ತಾನೇ ಪ್ರಚಾರಕ್ಕೆ ಬರುತ್ತಿರುವೆ. ಹೀಗಾಗಿ ಎಲ್ಲರ ಆಶೀರ್ವಾದ ತೆಗೆದುಕೊಂಡರೆ ಗೆಲ್ಲುವುದಕ್ಕೆ ಒಳ್ಳೆಯದು. ಹಾಸನ ಕಾಂಗ್ರೆಸಿಗರೆಲ್ಲರೂ ಒಟ್ಟಾಗಿ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಎಂಆರ್‌ಡಿಎಲ್ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ನಗರದ ಕ್ವೀನ್ಸ್‌ರಸ್ತೆಯಲ್ಲಿನ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ತನ್ನನ್ನು ಬೆಂಬಲಿಸಬೇಕು. ಜತೆಗೆ ಚುನಾವಣೆ ಪ್ರಚಾರಕ್ಕೆ ಆಗಮಿಸಬೇಕು ಎಂದು ಪ್ರಜ್ವಲ್ ರೇವಣ್ಣ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News