ಜೆಡಿಎಸ್ ಪರ ಇದ್ದರೆ ಪ್ರಚಾರ, ನಮ್ಮ ಪರ ಬಂದರೆ ಅನಾಚಾರವೆ ?

Update: 2019-03-26 16:35 GMT

ಮಂಡ್ಯ, ಮಾ.26: ಚಿತ್ರನಟರು ಅವರ ಪರ ಪ್ರಚಾರಕ್ಕೆ ಹೋದರೆ ಅದು ಪ್ರಚಾರ. ನಮ್ಮ ಪರ ಪ್ರಚಾರಕ್ಕೆ ಬಂದರೆ ಅದು ಅನಾಚಾರವೆ? ಎಂದು ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

ಮಂಗಳವಾರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೆ.ಆರ್.ಎಸ್ ಭಾಗದಲ್ಲಿ ಬಿರುಸಿನ ಮತ ಪ್ರಚಾರ ನಡೆಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನ ಇದೆಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಅವರು ದಡ್ಡರೂ ಅಲ್ಲ, ಮುಟ್ಠಾಳರೂ ಅಲ್ಲ ಎಂದು ತಿರುಗೇಟು ನೀಡಿದರು.

ಯಶ್, ದರ್ಶನ್ ಅವರನ್ನು ಕಳ್ಳೆತ್ತುಗಳೆಂದು ಟೀಕಿಸುವುದು ಸಿಎಂ ಕುರ್ಚಿಗೆ ಶೋಭೆ ತರುವಂತಹದಲ್ಲ. ಯಶ್ ಬಗೆಗೆ ಸಿಎಂಗಿಂತಲೂ ಸಚಿವ ಸಾ.ರಾ ಮಹೇಶ್‍ಗೆ ಹೆಚ್ಚು ಗೊತ್ತು. ಏಕೆಂದರೆ, ಮಹೇಶ್ ಚುನಾವಣೆಯಲ್ಲೂ ಯಶ್ ಹೋಗಿ ಪ್ರಚಾರ ಮಾಡಿದ್ದರು ಎಂದು ಹೇಳಿದರು.

ಟೀಕೆ ಮಾತನ್ನು ನಾನು ಸಹಿಸುತ್ತೇನೆ. ಆದರೆ ಜನ ಸಹಿಸುವುದಿಲ್ಲ. ದರ್ಶನ್, ಯಶ್ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಗೌರವ, ಮರ್ಯಾದೆಯಿಂದ ಚುನಾವಣೆ ನಡೆಸಬೇಕು, ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಸಲಹೆ ನೀಡಿದರು. ಯಾರು ಏನೆ ಟೀಕೆ ಮಾಡಿದರೂ ದರ್ಶನ್, ಯಶ್ ಪ್ರಚಾರಕ್ಕೆ ಬರಲಿದ್ದಾರೆ. ಸದ್ಯದಲ್ಲೇ ಅವರ ಪ್ರವಾಸದ ವಿವರ ನೀಡಲಾಗುವುದು. ನನ್ನ ಪರ ರಜನಿಕಾಂತ್ ಪ್ರಚಾರಕ್ಕೆ ಬರುವುದಿಲ್ಲ, ನಾನು ಆಹ್ವಾನವನ್ನೂ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಂಡ್ಯ ಲೋಕಸಭೆ ಚುನಾವಣೆ ವಿಚಾರದಲ್ಲಿ ಸಿಎಂ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರಾ ಎಂಬ ಪ್ರಶ್ನೆಗೆ, ಹಾಗೆನಿಸುತ್ತದೆ ಎಂದ ಸುಮಲತಾ, ನಾವು ಸಮಾವೇಶ ಮಾಡುವ ವೇಳೆಗೆ ಸರಿಯಾಗಿ ವಿದ್ಯುತ್ ಕಡಿತವಾಗುತ್ತದೆ. ಆದರೆ, ಅವರ ಸಮಾವೇಶಕ್ಕೆ ವಿದ್ಯುತ್ ಕಟ್ ಆಗಬಾರದೆಂದು ಅಧಿಕಾರಿಯೇ ಪತ್ರ ಬರೆದಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದರು.

ತಮ್ಮನ ಕ್ಷೇತ್ರ ಬಿಡಬಹುದಿತ್ತು:
ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಲು ನಿಖಿಲ್‍ಗೆ ಮತ ನೀಡಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದು, ಅಷ್ಟೊಂದು ಕಾಳಜಿ ಇದ್ದಿದ್ದರೆ ಅವರ ತಮ್ಮನ ಕ್ಷೇತ್ರ ಬಿಟ್ಟುಕೊಡಬಹುದಿತ್ತು. ಅವರಿಗೆ ಮಂಡ್ಯದಲ್ಲಿ ಅಂಬರೀಷ್ ಹೆಸರು ಹೇಳದೆ ಬೇರೆ ವಿಧಿ ಇಲ್ಲ. ಹಾಗಾಗಿಯೆ ಒಂದೆರಡು ಸಭೆಯಲ್ಲಿ ಅಂಬರೀಷ್ ಹೆಸರೇಳದೆ ಪ್ರಚಾರ ಮಾಡಿ ಎಂದು ಹೇಳಿದ್ದೇನೆ ಎಂದು ಸುಮಲತಾ ತಿಳಿಸಿದರು.

ಅಂಬರೀಷ್ ನಿಧನದ ವೇಳೆ ಬಹಿರಂಗವಾಗಿಯೇ ಸರಕಾರ, ಸಿಎಂ, ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದೆ. ಅದು ರಾಜಕೀಯ ಲಾಭ ಪಡೆಯಲು ಮಾಡಿದ್ದೇ ಎನ್ನುವುದನ್ನು ಅವರನ್ನೇ ಕೇಳಬೇಕು. ಹೋದಲೆಲ್ಲಾ ಅಂಬರೀಷ್ ಹೆಸರಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಅವರ ಅಭಿವೃದ್ಧಿ ಮುಂದಿಟ್ಟು ಚುನಾವಣೆ ಮಾಡಿದರೆ ಗೌರವ ಎಂದು ಅವರು ಹೇಳಿದರು.

ಸಾವಿನ ಹೆಸರಲ್ಲಿ ರಾಜಕಾರಣ ಮಾಡುವುದು ಹೇಸಿಗೆ ಹುಟ್ಟಿಸುವಂತಹದ್ದು. ಮುನಿರತ್ನ ಅವರಿಗೆ ಮಂಡ್ಯದಲ್ಲಿ ಬಂದು ಮಾತಾಡುವ ನೈತಿಕತೆಯೇ ಇಲ್ಲ. ಅಂಬರೀಷ್ ಏನಾಗಿದ್ದರು, ಯಾವ ರೀತಿ ಲಾಭ ಪಡೆದಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ಅವರು ಎಚ್ಚರಿಕೆ ನೀಡಿದರು. ಜನರು ಮಂಡ್ಯದ ಗಂಡು ನೋಡಿದ್ದಾರೆ, ಮಂಡ್ಯದ ಹೆಣ್ಣನ್ನೂ ನೋಡುತ್ತಾರೆ ಎಂದು ಮಂಡ್ಯದ ಗಂಡು ಸ್ಥಾನ ತುಂಬಲಿರುವುದಾಗಿ ನಿಖಿಲ್ ಹೇಳಿಕೆಗೆ ಅವರು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News