ಮೋದಿ ಹಿರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಿಂದೂ ಸಂಸ್ಕೃತಿಗೆ ವಿರುದ್ಧ: ಅರವಿಂದ ಕೇಜ್ರಿವಾಲ್

Update: 2019-03-26 15:46 GMT

ಹೊಸದಿಲ್ಲಿ, ಮಾ. 26: ಪ್ರಧಾನಿ ನರೇಂದ್ರ ಮೋದಿ ಅವರು ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿಯವರಂತಹ ಹಿರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಅವಮಾನಕರ ಹಾಗೂ ಇದು ಹಿಂದು ಸಂಸ್ಕೃತಿಗೆ ವಿರುದ್ಧವಾದುದು ಎಂದು ಅರವಿಂದ ಕೇಜ್ರಿವಾಲ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾನ್ಪುರ ಕ್ಷೇತ್ರದಿಂದ ಸ್ವರ್ಧಿಸದಿರುವಂತೆ ಪಕ್ಷ ಸೂಚಿಸಿರುವುದಾಗಿ ಬಹಿರಂಗ ಪತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಘೋಷಿಸಿದ ಬಳಿಕ ಕೇಜ್ರಿವಾಲ್ ಈ ಟ್ವೀಟ್ ಮಾಡಿದ್ದಾರೆ. ಕಳೆದ ವಾರ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಕೂಡ ಪಕ್ಷದಿಂದ ಇದೇ ರೀತಿಯ ಸಂದೇಶ ಸ್ವೀಕರಿಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸರಣಿ ಟ್ವೀಟ್‌ನಲ್ಲಿ ಅರವಿಂದ ಕೇಜ್ರಿವಾಲ್, ಹಿರಿಯರಿಗೆ ಅವಮಾನ ಮಾಡುವುದು ಹಿಂದೂ ಅಥವಾ ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದು ಹೇಳಿದ್ದಾರೆ.

‘‘ಹಿರಿಯರಾದ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿಯವರನ್ನು ಮೋದಿ ಅವಮಾನ ಮಾಡುವ ರೀತಿ ಹಿಂದೂ ಸಂಸ್ಕೃತಿಗೆ ವಿರುದ್ಧವಾದುದು. ಹಿಂದೂ ಧರ್ಮದಲ್ಲಿ ನಾವು ಹಿರಿಯರಿಗೆ ಗೌರವ ನೀಡುತ್ತೇವೆ’’ ಎಂದು ದಿಲ್ಲಿ ಮುಖ್ಯಮಂತ್ರಿ ಟ್ವೀಟ್‌ನಲ್ಲಿ ಹೇಳಿದ್ದಾರೆ. ಮನೆ ಕಟ್ಟಿದವರನ್ನೇ ಮನೆಯಿಂದ ಹೊರಗೆ ಹಾಕಲಾಗಿದೆ. ತಮ್ಮ ಹಿರಿಯರಿಗೇ ನಿಷ್ಠೆ ತೋರಿಸಿದವರು, ನಿಷ್ಠೆಯ ಬಗ್ಗೆ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುತ್ತಿದೆ ಎಂದು ಅರವಿಂದ ಕೇಜ್ರಿವಾಲ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News