ಗಾಂಧಿ ಹಂತಕರನ್ನು ಮಹಾತ್ಮರೆನ್ನುವ ಕಾಲಘಟ್ಟದಲ್ಲಿದ್ದೇವೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2019-03-26 18:38 GMT

ಮೈಸೂರು,ಮಾ.26: ಕಲೆ,ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡೆಗಳ ಮೂಲಕ ದೇಶವನ್ನು ಕಟ್ಟುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದು ಹೆಸರಾಂತ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಗಾಂಧೀ ಅಧ್ಯಯನ ಕೇಂದ್ರ, ಗಾಂಧೀ ಭವನ, ಮಾನಸ ಗಂಗೋತ್ರಿ ಹಾಗೂ ಸಾಹಿತ್ಯ ಅಕಾಡೆಮಿ, ನವದೆಹಲಿ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಗಂಗೋತ್ರಿಯ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಗಾಂಧೀ ಕವಿಗೋಷ್ಠಿ”ಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಗಾಂಧಿಯನ್ನು ಕೊಂದವರನ್ನು ಮಹಾತ್ಮ ಎಂದು ಕೂಗುವ ಕಾಲಘಟ್ಟದಲ್ಲಿ ನಾವಿದ್ದು, ತಲ್ಲಣಗಳನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕಲೆ, ಸಾಹಿತ್ಯ ಸಂಸ್ಕೃತಿ ಮೂಲಕ ದೇಶವನ್ನು ಕಟ್ಟುವ ಕೆಲಸವನ್ನು ಮಾಡಬೇಕಿದ್ದು, ದೇಶ ಕಟ್ಟುವ ಶಕ್ತಿ ರಾಜಕೀಯಕ್ಕಿಲ್ಲ ಎಂದು ಹೇಳಿದರು.

ಕಾವ್ಯ ಜಗತ್ತಿಗೆ ಬಹಳ ಮುಖ್ಯ. ಎಳೆಯ ಮನಸ್ಸುಗಳನ್ನು ಕಾವ್ಯ ಸಾಹಿತ್ಯದ ಮೂಲಕ ಉತ್ತಮ ಸಮಾಜಕ್ಕೆ ತರಬಹುದು. ಇಲ್ಲದಿದ್ದರೆ ಯಾವುದೋ ಪ್ರಭಾವಕ್ಕೆ ಒಳಗಾಗಿ ವಾಗ್ಮೊರೆ ಯಂತಹ ಹುಡುಗ ಕೊಲೆಗಡುಕನಾಗುತ್ತಾನೆ. ತನ್ನ ತಾಯಿಗೆ ಮಗ ಈ ಕೆಲಸ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ. ಹಾಗಾಗಿ ನಾವು ದೇಶದಲ್ಲಿ ಸೂಕ್ಷ್ಮವಾಗಿ ಕೆಲವು ಸಂದರ್ಭಗಳನ್ನು ಗಮನಿಸಬೇಕು ಎಂದು ಹೇಳಿದರು.

ಗಾಂಧಿ ಕಂಡ ಕನಸ್ಸನ್ನು ಸಾಕಾರಗೊಳಿಸಬೇಕಾದ ನಾವು ಗಾಂಧಿ ಕೊಂದವರನ್ನೇ ಮಹಾತ್ಮ ಎಂದು ಕೂಗುವ ಕಾಲಘಟ್ಟದಲ್ಲಿ ತಲ್ಲಣಗಳನ್ನು ಎದುರಿಸುತ್ತಿದ್ದೇವೆ. ವಾಸ್ತವ ಸ್ಥಿತಿಯನ್ನು ನೆನಸಿಕೊಂಡರೆ ಭಯವಾಗುತ್ತದೆ. ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಇರುವ ಸಂದರ್ಭದಲ್ಲಿ ಪ್ರತಿನಿತ್ಯ ರೈತರ ಆತ್ಮಹತ್ಯೆಗಳನ್ನು ಕಂಡು ಬೇಸರವಾಗುತ್ತಿದೆ ಎಂದರು.

ಬೃಹತ್ ಭಾರತದ ಕನಸು ಕಂಡ ಗಾಂಧೀಜಿ, ಎಲ್ಲೋ ಒಂದು ಕಡೆ ಕುಳಿತು ಚಿಂತಿಸಿದವರಲ್ಲ. ಇಡೀ ದೇಶವನ್ನು ಸುತ್ತಿದವರು. ಬ್ಯಾರಿಸ್ಟರ್ ನಿಂದ ಬಂದ ಗಾಂಧಿ ಸೂಟು ಬೂಟು ಧರಿಸಕೊಂಡು ದೇಶ ಸುತ್ತುವ ಸಂದರ್ಭದಲ್ಲಿ ಒಂದು ನದಿಯ ದಡದಲ್ಲಿ ಒಬ್ಬ ಹೆಣ್ಣುಮಗಳು ಬಟ್ಟೆ ಹೊಗೆಯುವ ಸ್ಥಿತಿ ಕಂಡು ಮರುಗುತ್ತಾರೆ. ಆಗಲೇ ಅವರು ತಮ್ಮ ಬಟ್ಟೆಯನ್ನು ಬಿಚ್ಚಿ ಫಕೀರನಂತೆ ದೇಶ ಸುತ್ತುತ್ತಾ ಬೃಹತ್ ಭಾರವನ್ನು ಬದುಕಿನ ದೇಶವನ್ನು ಕಟ್ಟುತ್ತಾರೆ. ಐನ್‍ಸ್ಟೀನ್ ಸಹ ಗಾಂಧೀಯನ್ನು ಮಹಾತ್ಮ ಎಂದು ಕರೆಯುತ್ತಾರೆ. ಈ ವೇಳೆಯಲ್ಲಿ ಅಂಬೇಡ್ಕರ್ ಸಹ ಇದ್ದು ಅವರು ವಿರುದ್ಧ ಧಿಕ್ಕಿನಲ್ಲಿ ಸಾಗುತ್ತಾರೆ ಎಂದರು.

ಅಂಬೇಡ್ಕರ್ ಕಳೆದುಕೊಂಡದ್ದಕ್ಕಿಂತ ಹೆಚ್ಚು ಪಡೆದುಕೊಳ್ಳುತ್ತಾರೆ. ಇಡೀ ಸಮುದಾಯವನ್ನು ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ಕಂಡುಕೊಳ್ಳುವ ಅವರು ಸಂಸ್ಕೃತ, ಇಂಗ್ಲೀಷ್, ಸೇರಿದಂತೆ ವಿಶ್ವದ ಜ್ಞಾನವನ್ನು ಪಡೆದುಕೊಳ್ಳುತ್ತಾರೆ. ಗಾಂಧೀಜಿ ಸತ್ಯಾಗ್ರಹ, ಅಹಿಂಸೆ ಮೂಲಕ ದೇಶವನ್ನು ಕಟ್ಟುತ್ತಾರೆ, ಗಾಂಧೀಜಿ ಪಡೆದುಕೊಳ್ಳುವುದಕ್ಕಿಂತ ಹೆಚ್ಚು ಕಳೆದುಕೊಳ್ಳುತ್ತಾರೆ. ಶ್ರೀಮಂತನಾಗಿದ್ದ ಒಂದು ಜೈನಕುಟುಂಬದಿಂದ ಬಂದಂತಹ ಗಾಂಧಿ ಸಾಮಾನ್ಯನಂತೆ ಅತ್ಯಂತ ಸರಳ ಬದುಕನ್ನು ಕಂಡುಕೊಳ್ಳುತ್ತಾರೆ. ಇದು ಇವರು ಕಳೆದುಕೊಂಡದ್ದು, ಆದರೆ ದೇಶವನ್ನು ಕಟ್ಟುನ ಚಿಂತನೆಯಲ್ಲಿ ಅಂಬೇಡ್ಕರ್ ಮತ್ತು ಗಾಂಧಿಯವರುದು ವಿರುದ್ಧ ದಿಕ್ಕುಗಳಾದರೂ, ಅವರ ನಿಲುವು ಒಂದೇ ಆಗಿತ್ತು ಎಂದು ಹೇಳಿದರು.

ನಾಡಿನ ಹೆಸರಾಂತ ಕವಿಗಳಾದ ಕಾಳೇಗೌಡ ನಾಗವಾರ, ಎಸ್.ಜಿ.ಸಿದ್ದರಾಮಯ್ಯ, ಚ.ಸರ್ವಮಂಗಳಾ, ಬಿ.ಎಂ.ಬಶೀರ್, ಸವಿತಾ ನಾಗಭೂಷಣ, ಸರಜೂ ಕಾಟ್ಕರ್, ಕೆ.ಬಿ.ಸಿದ್ದಯ್ಯ, ಲಕ್ಷ್ಮೀಪತಿ ಕೋಲಾರ, ಮಹಾದೇವ ಶಂಕನಪುರ, ಚಂದ್ರಶೇಖರ ತಾಳ್ಯ, ಜಿ.ವಿ.ಆನಂದಮೂರ್ತಿ, ಸತೀಶ್ ಕುಲಕರ್ಣಿ, ಜ.ನಾ.ತೇಜಶ್ರೀ, ಸುಬ್ಬು ಹೊಲೆಯಾರ್, ಲೋಕೇಶ್ ಅಗಸನಕಟ್ಟೆ ಸತ್ಯಮಂಗಲ ಮಹಾದೇವ ಕವಿತೆ ವಾಚಿಸಿದರು.

ಮಹಾತ್ಮ ಗಾಂಧೀಜಿ ಕುರಿತ ಕುವೆಂಪು, ದ.ರಾ.ಬೇಂದ್ರೆ, ಪು.ತಿ.ನ., ಎಂ.ಗೋಪಾಲಕೃಷ್ಣ ಅಡಿಗ, ಜಿ.ಎಸ್.ಶಿವರುದ್ರಪ್ಪ, ಡಿ.ಗೋವಿಂದದಾಸ್, ಪಿ.ಲಂಕೇಶ್ ಇವರುಗಳ ಕವಿತೆಯನ್ನು ಎನ್.ಎಂ.ತಳವಾರ, ಎಂ.ಎಚ್.ರುದ್ರಮುನಿ, ಎ.ಟಿ.ಸದೆಬೋಸ್, ಡಾ.ಜ್ಯೋತಿ, ವೈ.ಡಿ.ರಾಜಣ್ಣ, ನಿರಂಜನ್ ದಾಸ್ ರಾಜ್ಬಾನ್, ಚಿಕ್ಕಮಗಳೂರು ಗಣೇಶ್ ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸರಾಂತ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ವಹಿಸಿದ್ದರು. ಗಾಂಧೀ ಭವನದ ನಿರ್ದೇಶ ಪ್ರೊ.ಎಂ.ಎಸ್.ಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಮೈಸೂರು ವಿ.ವಿ. ಕುಲಪತಿ ಪ್ರೊ.ಹೇಮಂತ್ ಕುಮಾರ್ ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಪ್ರಸಿದ್ಧ ರಂಗಕರ್ಮಿ ಜನಾರ್ಧನ್(ಜನ್ನಿ) ಆಶಯ ಗೀತೆಯನ್ನು ಹಾಡಿದರು. ಕಾಳೇಗೌಡ ನಾಗವಾರ ಕುಲ ಸಚಿವ ಪ್ರೊ.ಲಿಂಗರಾಜ ಗಾಂಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News