ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಬೆಂಬಲ: ಸಿಪಿಐ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ

Update: 2019-03-26 18:48 GMT

ಚಿಕ್ಕಮಗಳೂರು, ಮಾ.26: ಕೋಮುವಾದಿ ಪಕ್ಷಗಳು ಅಧಿಗಾರದ ಗದ್ದುಗೆ ಏರುವುದನ್ನು ತಡೆಯುವ ಸಲುವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಪಕ್ಷ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳಿಂದ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ರನ್ನು ಪಕ್ಷ ಬೆಂಬಲಿಸಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಸಮಿತಿಗಳು ಚುನಾವಣೆಯಲ್ಲಿ ಕಣಕ್ಕಿಳಿಯಬೇಕೇ ಅಥವಾ ಬೇಡವೇ ಇಲ್ಲ ಬೇರೆಯವರನ್ನು ಬೆಂಬಲಿಸಬೇಕೋ ಎಂಬ ತೀರ್ಮಾನ ಕೈಗೊಳ್ಳಲು ಜಿಲ್ಲಾ ಸಮಿತಿಗೆ ಅನುಮತಿ ನೀಡಿತ್ತು. ಅದರಂತೆ ಸೋಮವಾರ ಜಿಲ್ಲಾ ಸಮಿತಿ ಸಭೆ ಸೇರಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಹಿಂದೆದಿಗಿಂತಲೂ ಭೀಕರ ಪರಿಸ್ಥಿತಿ ಎದುರಾಗಿದೆ. ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತಿದೆ. ಇದಕ್ಕೆಲ್ಲ ಕೇಂದ್ರದ ಬಿಜೆಪಿ ಸರಕಾರ ಕಾರಣವಾಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ನಿರ್ಣಯ ಕೈಗೊಳ್ಳುವಂತೆ ಜಿಲ್ಲಾ ಸಮಿತಿಗೆ ರಾಷ್ಟ್ರ ಸಮಿತಿ ಸೂಚಿಸಿತ್ತು. ರಾಷ್ಟ್ರ ಸಮಿತಿ ಸೂಚನೆ ಮೇರೆಗೆ ಚರ್ಚಿಸಿ ಈ ಸಂದರ್ಭದಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಿದರೆ ಬಿಜೆಪಿಗೆ  ಅನುಕೂಲ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಉದ್ದೇಶದಿಂದ ಸ್ಫರ್ಧಾ ಕಣದಿಂದ ಪಕ್ಷ ಹಿಂದೆ ಸರಿದು ಜೆಡಿಎಸ್-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಿರುವುದಾಗಿ ಅವರು ತಿಳಿಸಿದರು. 

ಬಿಜೆಪಿ ಹೊರತುಪಡಿಸಿ ಕಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ, ಸಿಪಿಐ(ಎಂಎಲ್), ಬಿಎಸ್ಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಶಕ್ತಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ಮಾತ್ರ ಸಾಧ್ಯ. ಆದ್ದರಿಂದ ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದ ಅವರು, ಮೈತ್ರಿ ಪಕ್ಷಗಳು ಹಾಗೂ ಅಭ್ಯರ್ಥಿ ತಮಗೆ ಬೆಂಬಲ ನೀಡುವಂತೆ ಸಿಪಿಐ ಪಕ್ಷಕ್ಕೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ. ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಅಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಾಗುವುದು. ಪಕ್ಷದ ಕಾರ್ಯಕರ್ತರಿಗೆ ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ತಿಳಿಸುವುದಲ್ಲದೆ, ಜಿಲ್ಲೆಯಾದ್ಯಂತ ಪ್ರಚಾರ ಮಾಡಿ ಮತದಾರರಿಗೂ ಮೈತ್ರಿ ಪಕ್ಷಕ್ಕೆ ಮತ ನೀಡುವಂತೆ ಕೋರಲಾಗುವುದು ಎಂದರು.

ಜಿಲ್ಲೆಯ ಸಮಸ್ಯೆಗಳಿಗೆ ಶೋಭಾ ಕರಂದ್ಲಾಜೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಾಫಿ ಉದ್ಯಮ ನಷ್ಟದಲ್ಲಿದೆ. ಕಾಫಿಯಿಂದ ದೇಶಕ್ಕೆ ಕೋಟ್ಯಾಂತರ ರೂ. ವಿದೇಶಿ ವಿನಿಮಯ ಕೇಂದ್ರ ಸರಕಾರಕ್ಕೆ ಬರುತ್ತಿದೆ. ಇಂತಹ ಪರಿಸ್ಥಿತಿ ಕೇವಲ ಕಾಫಿ ಬೆಳೆಗಾರರಿಗೆ ಮಾತ್ರವಲ್ಲದೆ, ಅದರ ಮೇಲೆ ಅವಲಂಬಿತರಾಗಿರುವ ಲಕ್ಷಾಂತರ ಜನರಿಗೆ ಸಮಸ್ಯೆಯನ್ನು ಉಂಟು ಮಾಡಿದೆ. ಆದರೆ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಮುಖಂಡರಾದ ಗುಣಶೇಖರ್, ವಿಜಯ್‍ಕುಮಾರ್ ಮತ್ತು ರಾಧಾಸುಂದರೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News