ಚುನಾವಣಾ ಪ್ರಚಾರಗಳು ಮತ್ತು ಪ್ರೇಕ್ಷಕರಾಗಿರುವ ಸಾರ್ವಜನಿಕರು

Update: 2019-03-26 18:58 GMT

ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆ ಆಳುವ ಪಕ್ಷಗಳ ಮತ್ತು ವಿರೋಧ ಪಕ್ಷಗಳ ಪ್ರಚಾರಗಳು ಬಿರುಸಾಗುತ್ತಿವೆ. ಆದರೆ ಸಾಮಾನ್ಯ ಮತದಾರರ ದೃಷ್ಟಿಯಿಂದ ನೋಡುವುದಾದರೆ ಯಾವ ಸಮಸ್ಯೆ ಮತ್ತು ಪ್ರಶ್ನೆಗಳು ಮುಖ್ಯತ್ವವನ್ನು ಪಡೆಯಲಿವೆ ಮತ್ತು ಈ ಚುನಾವಣೆಯು ಜನತೆಯ ನೈಜ ಸಮಸ್ಯೆಗಳನ್ನು ವ್ಯಕ್ತಪಡಿಸಬಲ್ಲ ವೇದಿಕೆಯಾಗಲಿದೆಯೇ ಎಂಬುದನ್ನು ಈ ಪ್ರಚಾರಗಳ ಸ್ವರೂಪ ಮತ್ತು ಸಾರಗಳು ನಿರ್ಧರಿಸಲಿವೆ.

ಒಂದು ಪ್ರಾತಿನಿಧಿಕ ಪ್ರಜಾತಂತ್ರದಲ್ಲಿ ಚುನಾವಣೆಗಳು ಸಮಾಜವನ್ನು ಪ್ರಜಾತಾಂತ್ರಿಕ ಮಾರ್ಗದಲ್ಲಿ ಪುನರ್ರೂಪಿಸುವ ವಿಷಯಗಳ ಮೇಲೆ ಪ್ರಭಾವ ಬೀರುವ ವಿಷಯಗಳ ಬಗ್ಗೆ ಸಾಮೂಹಿಕ ಸಂವಾದವನ್ನು ನಡೆಸುವ ಮತ್ತು ಆ ಪ್ರಶ್ನೆಗಳಿಗೆ ಸರಕಾರದ ಪ್ರತಿಕ್ರಿಯೆಯನ್ನು ಅರಿಯುವ ಅವಕಾಶಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣಾ ಪ್ರಚಾರಗಳನ್ನು ಅಂತಹ ಸಂವಾದದ ತಾಣವಾಗಿಸುವ ಬದಲು ಸಾರ್ವಜನಿಕರು ಹೊರನಿಂತು ವೀಕ್ಷಿಸುವ ಒಂದು ಆಟದ ರೀತಿ ಅಥವಾ ಮತದಾರರು ದೂರನಿಂತು ವೀಕ್ಷಿಸಬೇಕಾದ ದೃಶ್ಯಾವಳಿಯೆಂಬಂತೆ ನಡೆಸಲಾಗುತ್ತಿದೆ. ಚುನಾವಣೆಯ ಪ್ರಕ್ರಿಯೆಗಳಲ್ಲಿ ತರಲಾಗಿರುವ ಈ ಉದ್ದೇಶಪೂರ್ವಕ ಬದಲಾವಣೆಗಳು ನಮ್ಮ ಪ್ರಜಾತಂತ್ರದ ಸಾರವನ್ನು ಮೂಲೆಗುಂಪುಮಾಡುವ ಎರಡು ಪ್ರಕ್ರಿಯೆಗಳಿಗೆ, ಅಧ್ಯಕ್ಷೀಕರಣಕ್ಕೆ ಮತ್ತು ಮುನಿಸಿಪಲೀಕರಣಕ್ಕೆ ದಾರಿ ಮಾಡಿಕೊಡುತ್ತಿದೆ. ಅಧ್ಯಕ್ಷೀಕರಣವು ಇಡೀ ಚುನಾವಣೆ ಸಂಬಂಧಿ ಚರ್ಚೆ ಮತ್ತು ಸ್ಪರ್ಧೆಗಳನ್ನು ಪ್ರಧಾನಮಂತ್ರಿ ಸ್ಥಾನದ ಸ್ಪರ್ಧಿಯ ಸುತ್ತ ಅಥವಾ ಮೈತ್ರಿಕೂಟದ ಮುಖ ಯಾರೆಂಬ ಚರ್ಚೆಗೆ ಸೀಮಿತಗೊಳಿಸುತ್ತಿದೆಯಲ್ಲದೆ ಇಡೀ ಚುನಾವಣೆಯನ್ನು ವ್ಯಕ್ತಿಗಳಿಬ್ಬರ ಸ್ಪರ್ಧೆಯನ್ನಾಗಿ ಮಾಡಿಬಿಡುತ್ತಿದೆ. ಮುನಿಸಿಪಲೀಕರಣವು ಅಭ್ಯರ್ಥಿಯ ಸಾಧನೆ ಮತ್ತು ಕಾರ್ಯನಿರ್ವಣೆಗಳನ್ನು ಒಂದು ಕ್ಷೇತ್ರದಮಟ್ಟಕೆ ಮಾತ್ರ ಸೀಮಿತಗೊಳಿಸುತ್ತದೆ. ಇದರಲ್ಲಿ ಮುನಿಸಿಪಲೀಕರಣವು ಪ್ರಾತಿನಿಧಿಕ ಪ್ರಜಾತಂತ್ರದ ತತ್ವಕ್ಕೆ ಬದ್ಧವಾಗಿದ್ದು ಕೇಂದ್ರೀಕರಣ ಮತ್ತು ಸರ್ವಾಧಿಕಾರದ ಅಂಶಗಳುಳ್ಳ ಅಧ್ಯಕ್ಷೀಕರಣಕ್ಕೆ ತದ್ವಿರುದ್ಧವಾಗಿ ವಿಕೇಂದ್ರೀಕರಣದ ಅಂಶಗಳನ್ನು ಹೊಂದಿದೆಯೆಂದು ಕೆಲವರು ವಾದಿಸಬಹುದು. ಆದರೆ ಈ ಎರಡೂ ಧೋರಣೆಗಳು ಬೇರೆಬೇರೆ ರೀತಿಗಳಲ್ಲಿ ಜನತೆಯ ಪ್ರಜಾತಾಂತ್ರಿಕ ಪ್ರತಿನಿಧೀಕರಣವನ್ನು ಕಡಿತಗೊಳಿಸಿ ಜನತೆಯನ್ನು ದುರ್ಬಲಗೊಳಿಸುತ್ತಿವೆ.

ಅಧ್ಯಕ್ಷೀಕರಣದ ಪ್ರಕ್ರಿಯೆಯಲ್ಲಿ ಜನರು ಕೇಂದ್ರದ ಒಬ್ಬ ಪ್ರಬಲ ವ್ಯಕ್ತಿಗೆ ತಮ್ಮೆಲ್ಲಾ ಅಧಿಕಾರಗಳನ್ನು ವರ್ಗಾಯಿಸಬೇಕೆಂದು ನಿರೀಕ್ಷಿಸಲಾಗುತ್ತದೆ ಮತ್ತು ವ್ಯಕ್ತಿಗಳ ಕೌಶಲ್ಯ, ಸಾಮರ್ಥ್ಯ ಮತ್ತು ಆ ವ್ಯಕ್ತಿಯ ವ್ಯಕ್ತಿಗತ ಇತಿಮಿತಿಗಳೇ ಆ ಅಯ್ಕೆಗೆ ಮಾನದಂಡವಾಗಿರುತ್ತದೆ. ಹೀಗಾಗಿ ಚರ್ಚೆಗಳೆಲ್ಲಾ ಒಬ್ಬ ವ್ಯಕ್ತಿಯ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಮಾತುಗಾರಿಕೆಯ ಕೌಶಲ್ಯ ಹಾಗೂ ಎದುರಾಳಿಯಲ್ಲಿ ಅದಿಲ್ಲದಿರುವ ಬಗ್ಗೆ ಅಥವಾ ಮತ್ತೊಬ್ಬ ವ್ಯಕ್ತಿಯ ವಿನಯ ಮತ್ತು ಪಾಂಡಿತ್ಯ ಹಾಗೂ ಎದುರಾಳಿಯಲ್ಲಿ ಅದಿಲ್ಲದಿರುವುದರ ಸುತ್ತಲೇ ಸುತ್ತುತ್ತವೆ. ಹೀಗಾಗಿ ಸದ್ಯಕ್ಕಂತೂ ಜನರಿಗೆ ಆಳುವ ಪಕ್ಷದ ನೀತಿಗಳನ್ನು ಅಥವಾ ಭವಿಷ್ಯದ ಬಗೆಗಿನ ಧೋರಣೆಯನ್ನು ಪ್ರಶ್ನಿಸುವ ಅಥವಾ ವಿರೋಧಪಕ್ಷಗಳು ಮುಂದಿಡುತ್ತಿರುವ ಪರ್ಯಾಯಗಳನ್ನು ಪ್ರಶ್ನೆಗೊಳಪಡಿಸುವ ಅವಕಾಶಗಳನ್ನೇ ಒದಗಿಸುತ್ತಿಲ್ಲ. ಹೀಗೆ ಚುನಾವಣೆಗಳನ್ನು ಕೇವಲ ವ್ಯಕ್ತಿಗಳ ನಡುವಿನ ಸ್ಪರ್ಧೆಯನ್ನಾಗಿ ಮಾರ್ಪಡಿಸುವುದರಿಂದ ಸಮಾಜ ಮತ್ತು ಆರ್ಥಿಕತೆಯನ್ನು ಆಳುತ್ತಿರುವ ಯಾಜಮಾನ್ಯ ಶಕ್ತಿಗಳ ಪರವಾಗಿರುವ ನೀತಿಗಳು ಅಡೆತಡೆಯಿಲ್ಲದೆ ಮುಂದುವರಿಯುವುದು ಖಾತರಿಯಾಗುತ್ತದಲ್ಲದೆ ಅಧಿಕಾರ ಸಂಬಂಧಗಳನ್ನು ಬದಲಿಸಬಲ್ಲ ಮತದಾರರ ಶಕ್ತಿಯೂ ಮೂಲೆಗುಂಪಾಗುತ್ತದೆ. ಮತದಾರರ ಈ ಶಕ್ತಿಯನ್ನೇ ಅಪಹರಿಸಿದ ಮೇಲೆ ಪ್ರಜಾತಂತ್ರಕ್ಕೆ ಉಳಿಯುವ ಅರ್ಥವಾದರೂ ಏನು? ಮತದಾರರ ಕ್ರಿಯಾಶೀಲತೆಯನ್ನು ಒಂದು ಕ್ಷೇತ್ರದ ಮಟ್ಟಿಗೆ ಮಾತ್ರ ಸೀಮಿತಗೊಳಿಸುವ ಮೂಲಕ ಮತದಾರರ ಪ್ರಜಾತಾಂತ್ರಿಕ ಶಕ್ತಿಯ ಕಡೆಗಣನೆಯ ಪ್ರಕ್ರಿಯೆಗೆ ಪೂರಕವಾಗಿ ಮುನಿಸಿಪಲೀಕರಣವು ಕೆಲಸ ಮಾಡುತ್ತದೆ. ಮುನಿಸಿಪಲೀಕರಣಗೊಂಡ ರಾಜಕೀಯ ಪ್ರಜ್ಞೆಯು ನಿರ್ದಿಷ್ಟ ಯೋಜನೆಗಳ, ಶಾಸನಗಳ ಹಾಗೂ ಸರಕಾರದ ವರ್ಗ ಸ್ವಭಾವಗಳಂಥ ಮ್ಯಾಕ್ರೋಮಟ್ಟದ ಮತ್ತು ಮೂಲ ನೀತಿಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಪ್ರಶ್ನಿಸುವುದಿಲ್ಲ. ಅಲ್ಲದೆೆ ಮೇಲ್ನೋಟಕ್ಕೆ ಸ್ಥಳೀಯ ಅಥವಾ ತಮ್ಮ ಕ್ಷೇತ್ರಕ್ಕೆ ಮಾತ್ರ ಸಂಬಂಧಪಟ್ಟ ವಿಷಯವೆಂದು ಕಾಣಿಸಿಕೊಳ್ಳುವ ವಿಷಯಗಳ ಹಿಂದಿನ ಸಾರ್ವತ್ರಿಕವಾದ ಮತ್ತು ವ್ಯವಸ್ಥಾಗತವಾದ ನೀತಿಸ್ವರೂಪದ ವಿಷಯಗಳನ್ನು ಗ್ರಹಿಸಲು ಮುಂದಾಗುವುದಿಲ್ಲ. ಅಧಿಕಾರ ಕೇಂದ್ರವಾದ ದಿಲ್ಲಿ ಜನರಿಂದ ನಿಲುಕದಷ್ಟು ದೂರದೂರವಾಗುತ್ತಿರುವ ಸಂದರ್ಭದಲ್ಲಿ ಜನರನ್ನು ಗಲ್ಲಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಒಂದು ಸಂಸದೀಯ ಪ್ರಜಾತಂತ್ರದಲ್ಲಿ ದಿಲ್ಲಿಯ ಅಧಿಕಾರದ ಬೇರುಗಳು ಗಲ್ಲಿಗಳಲ್ಲಿರುವುದು ನಿಜವಾದರೂ, ದಿಲ್ಲಿಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳೇ ಗಲ್ಲಿ ಜೀವನದ ಮೇಲೂ ಪ್ರಭಾವ ಬೀರುವುದರಿಂದ ಜನರು ದಿಲ್ಲಿಗೂ ವಿಸ್ತರಿಸಿದ ಪ್ರಜ್ಞೆಯೊಂದಿಗೆ ಸಕ್ರಿಯಗೊಳ್ಳುವ ಅಗತ್ಯವಿದೆ. ಜನರ ಸಾರ್ವಜನಿಕ ಕ್ರಿಯಾಶೀಲತೆಯ ಪರಿಧಿಯನ್ನು ಕ್ಷೇತ್ರಮಟ್ಟಕ್ಕೆ ಸೀಮಿತಗೊಳಿಸುವುದರಿಂದ ಪ್ರಜಾತಂತ್ರವು ಚಲಿಸುತ್ತಿರುವ ದಿಕ್ಕಿನ ಬಗ್ಗೆ ಮತ್ತು ತಮ್ಮ ಜೀವನವನ್ನು ಪ್ರಭಾವಿಸುತ್ತಿರುವ ಶಕ್ತಿಗಳ ಬಗ್ಗೆ ತಾವೇ ಅರ್ಥಮಾಡಿಕೊಳ್ಳಬಹುದಾದ ಶೈಕ್ಷಣಿಕ ಪ್ರಕ್ರಿಯೆಗೂ ಅಡ್ಡಿಯುಂಟಾಗುತ್ತದೆ. ಈ ಪ್ರಕ್ರಿಯೆಯ ಪ್ರಧಾನ ಮಾಧ್ಯಮಗಳೆಂದರೆ ರಾಜಕೀಯ ಪಕ್ಷಗಳು ಮತ್ತು ಪ್ರಚಾರಗಳು. ಮುನಿಸಿಪಲೀಕರಣ ಮತ್ತು ಅದರ ಜೊತೆಗೆ ಅಧ್ಯಕ್ಷೀಕರಣಗಳು ರಾಜಕೀಯ ಪಕ್ಷಗಳ ಈ ಪಾತ್ರವನ್ನು ಮತ್ತು ಅವುಗಳ ಪ್ರಸ್ತುತವನ್ನೂ ಸಹ ಕುಬ್ಜಗೊಳಿಸಿಬಿಡುತ್ತವೆ.

ರಾಜಕೀಯ ಪಕ್ಷಗಳು ಜನರ ಜೊತೆ ಸಾವಯವ ಸಂಬಂಧಗಳನ್ನಿಟ್ಟುಕೊಂಡಿರುವ ತಾತ್ವಿಕ ಸಂಘಟನೆಗಳಾಗಿರದೇ ಹೋಗಿರುವುದು ಈ ಎರಡೂ ಪ್ರಕ್ರಿಯೆಗಳು ತೀವ್ರವಾಗಿರುವುದಕ್ಕೆ ಕಾರಣವಾಗಿದ್ದರೂ, ಚುನಾವಣಾ ಪ್ರಚಾರಗಳು ಮತ್ತು ಅವು ಹುಟ್ಟುಹಾಕುತ್ತಿರುವ ವಾಗ್ವಾದಗಳ ಸ್ವಭಾವಗಳು ಸಹ ಜನರ ಪ್ರಜಾತಾಂತ್ರಿಕ ಪರಿಕಲ್ಪನಾ ಶಕ್ತಿಯನ್ನು ಕುಗ್ಗಿಸುತ್ತಿವೆ. ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಪ್ರಣಾಳಿಕೆಗಳ ಮಹತ್ವವೇ ಕುಸಿಯುತ್ತಿರುವುದು ಇದಕ್ಕೊಂದು ದೊಡ್ಡ ಉದಾಹರಣೆ. ಚುನಾವಣಾ ಪ್ರಣಾಳಿಕೆಗಳನ್ನು ರೂಪಿಸುವ ರಾಜಕೀಯ ಪಕ್ಷಗಳ ಪ್ರಕ್ರಿಯೆಗಳಲ್ಲಾಗಲೀ ಅಥವಾ ಅದರ ಸಾರಾಂಶಗಳಲ್ಲಾಗಲೀ ಜನರಿಗೂ ಆಸಕ್ತಿಯಿಲ್ಲ. ಹಾಗೆಯೇ ರಾಜಕೀಯ ಪಕ್ಷಗಳು ಸಹ ತಮ್ಮ ಪ್ರಚಾರದಲ್ಲಿ ಚುನಾವಣಾ ಪ್ರಣಾಳಿಕೆಗಳಿಗೆ ಯಾವುದೇ ಮಹತ್ವವನ್ನು ಕೊಡುವುದಿಲ್ಲ. ಕೆಲವು ರಾಜಕೀಯ ಪಕ್ಷಗಳು ಇದಕ್ಕೆ ಹೊರತಾಗಿದ್ದರೂ, 2014ರ ಚುನಾವಣೆಯಲ್ಲಿ ಬಿಜೆಪಿ ತಮ್ಮ ಪ್ರಣಾಳಿಕೆಯನ್ನು ಮೊದಲ ಹಂತದ ಮತದಾನದ ದಿನ ಬಿಡುಗಡೆ ಮಾಡಿದ್ದರಲ್ಲಿ ಈ ಧೋರಣೆ ಸ್ಪಷ್ಟವಾಗಿ ವ್ಯಕ್ತವಾಗಿತ್ತು. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಬದ್ಧತೆ ಮತ್ತು ಪ್ರಾಮಾಣಿಕತೆಗಳ ಬಗ್ಗೆ ಜನರಿಗಿರುವ ಸಕಾರಣ ಅನುಮಾನಗಳೇ ಪ್ರಣಾಳಿಕೆಗಳ ಬಗ್ಗೆ ಅವರಿಗಿರುವ ಸಮರ್ಥನೀಯ ಉದಾಸೀನ ಧೋರಣೆಗೆ ಕಾರಣವಾಗಿದೆ. ಆದರೂ ಇದು ನಮ್ಮ ರಾಜಕೀಯ ಪಕ್ಷಗಳು ತಾವು ನಿರ್ಮಿಸಬೇಕೆಂದಿರುವ ಭವಿಷ್ಯದ ಬಗೆಗೆ ತಳೆದಿರುವ ಧೋರಣೆಗೆ ಒಂದು ಸ್ಪಷ್ಟ ನಿದರ್ಶನವನ್ನಂತೂ ನೀಡುತ್ತದೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ವ್ಯವಸ್ಥಿತವಾದ ಚರ್ಚೆಗಳಾಗದಿರುವುದರಿಂದ ಮತ್ತು ಅವುಗಳಲ್ಲಿ ಪ್ರಸ್ತಾಪಿತವಾದ ವಿಷಯಗಳ ಬಗ್ಗೆ ಮತದಾರರು ಮತ್ತು ಪಕ್ಷಗಳ ನಡುವೆ ಸಂವಾದಗಳೇ ನಡೆಯದಿರುವುದರಿಂದ ಚುನಾವಣಾ ಸ್ಪರ್ಧೆಗಳಲ್ಲಿ ತಾತ್ವಿಕ-ನೀತಿ ದೃಷ್ಟಿಕೋನಗಳ ಆಯಾಮವೇ ಇಲ್ಲದಂತಾಗುತ್ತಿದೆ. ಪಕ್ಷಗಳ ಕಾರ್ಯಕ್ರಮಗಳ ಹಾಗೂ ಭವಿಷ್ಯದ ದೃಷ್ಟಿಕೋನದ ಬಗೆಗಿನ ಚರ್ಚೆಗಳು ನಮ್ಮ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮತ್ತು ಸಮಾಜ ಹಾಗೂ ಸರಕಾರಗಳ ಭವಿಷ್ಯದ ಚಲನೆಯ ದಿಕ್ಕಿನ ಬಗೆಗಿನ ವಿವಿಧ ಅಭಿಪ್ರಾಯಗಳನ್ನು ಮುನ್ನೆಲೆಗೆ ತರುತ್ತವೆ.

ಮತ್ತೊಂದು ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷ ನಿಯಂತ್ರಿತ ಸರಕಾರವೇ ಅಧಿಕಾರಕ್ಕೆ ಬಂದರೆ ಸರಕಾರ ಮತ್ತು ಸಮಾಜವನ್ನು ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ದಿಕ್ಕಿನಲ್ಲಿ ಕೊಂಡೊಯ್ಯುವ ಖಚಿತ ಅಪಾಯವು ಎದುರಾಗಿರುವ ಸಂದರ್ಭದಲ್ಲಿ ಭವಿಷ್ಯದ ದಿಕ್ಕಿನ ಬಗೆಗಿನ ಅಭಿಪ್ರಾಯಗಳು ಚುನಾವಣಾ ಕಣದಲ್ಲಿ ಸಂಘರ್ಷಿಸುವುದು ಹಿಂದೆಂದಿಗಿಂತಲೂ ಅಗತ್ಯವಾಗಿದೆ. ಸ್ವಾತಂತ್ರ್ಯಾ ನಂತರದಲ್ಲಿನ ಚುನಾವಣೆಗಳಲ್ಲೇ 2019ರ ಈ ಚುನಾವಣೆ ಅತ್ಯಂತ ಮಹತ್ವಪೂರ್ಣವಾದ ಚುನಾವಣೆಯಾಗಿದ್ದಲ್ಲಿ ಅದರ ಸುತ್ತಲಿನ ಸಾರ್ವಜನಿಕ ಸಂಕಥನಗಳಲ್ಲಿ ಆ ಗಾಂಭೀರ್ಯತೆಯು ವ್ಯಕ್ತವಾಗುವುದನ್ನು ನಾಗರಿಕರು ಖಾತರಿಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News