ಅಮ್ರಪಾಲಿ ಸಮೂಹದ ವಿರುದ್ಧ ಸುಪ್ರೀಂಕೋರ್ಟ್ ಕಟ್ಟೆ ಏರಿದ ಎಂ.ಎಸ್. ಧೋನಿ

Update: 2019-03-27 05:33 GMT

ಹೊಸದಿಲ್ಲಿ, ಮಾ. 27: ವಂಚನೆಗೊಳಗಾದ ಸಾವಿರಾರು ಮಂದಿ ಮನೆ ಖರೀದಿದಾರರ ಬಳಿಕ ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅಮ್ರಪಾಲಿ ಸಮೂಹದ ವಿರುದ್ಧ ಸುಪ್ರೀಂಕೋರ್ಟ್ ಕಟ್ಟೆ ಏರಿದ್ದಾರೆ.

ಆರು ವರ್ಷಗಳ ಕಾಲ ಕಂಪನಿಯ ಯೋಜನೆಗಳ ಪ್ರಚಾರ ಹಾಗೂ ಮಾರಾಟಕ್ಕಾಗಿ ತಮ್ಮ ಸೇವೆಯನ್ನು ಬಳಸಿಕೊಂಡಿದ್ದಕ್ಕಾಗಿ ಬಾಕಿ ಇರುವ 40 ಕೋಟಿ ರೂ. ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಧೋನಿ ಕೋರಿದ್ದಾರೆ.

ಧೋನಿ 2009ರಲ್ಲಿ ಅಮ್ರಪಾಲಿ ಸಮೂಹದ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ಕಂಪನಿ ಜತೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಕಂಪೆನಿಯ ವಿವಿಧ ಮಾರುಕಟ್ಟೆ ಹಾಗೂ ಸಾರ್ವಜನಿಕ ಸಂಪರ್ಕ ಚಟುವಟಿಕೆಗಳಿಗೆ ತಮ್ಮ ಒಪ್ಪಿಗೆಯ ಮುದ್ರೆಯನ್ನು ಬಳಸಿಕೊಳ್ಳುವ ಹಕ್ಕನ್ನು ಕಂಪನಿಗೆ ನೀಡಿದ್ದರು.

2016ರವರೆಗೂ ಕಂಪನಿಯ ಸಖ್ಯ ಹೊಂದಿದ್ದ ಅವರು, ವಂಚನೆಗೀಡಾದ ಮನೆ ಖರೀದಿದಾರರು ಈ ಕ್ರಿಕೆಟರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡು ಕಂಪನಿಯ ಪರ ಪ್ರಚಾರ ಮಾಡದಂತೆ ಒತ್ತಡ ತಂದ ಹಿನ್ನೆಲೆಯಲ್ಲಿ ಆ ಬಳಿಕ ಹಿಂದೆಸರಿದಿದ್ದರು. ಈ ಉದ್ಯಮ ಸಮೂಹದ ದತ್ತಿ ಕಾರ್ಯಾಚರಣೆಯಲ್ಲಿ ಧೋನಿ ಪತ್ನಿಯೂ ಗುರುತಿಸಿಕೊಂಡಿದ್ದಾರೆ.

ಕಂಪನಿಯ ವಿರುದ್ಧ ಒಟ್ಟು 46 ಸಾವಿರ ಮಂದಿ ಸುಪ್ರೀಂಕೋರ್ಟ್ ಕಟ್ಟೆ ಏರಿದ್ದು, ತಮಗೆ ಫ್ಲಾಟ್‌ಗಳನ್ನು ನೀಡದೇ ಕಂಪನಿ ವಂಚಿಸಿದೆ ಎಂದು ದೂರಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅಮ್ರಪಾಲಿ ಕಂಪನಿ ಹಾಗೂ ಎಲ್ಲ ಸಹ ಸಂಸ್ಥೆಗಳ, ಅವುಗಳ ನಿರ್ದೇಶಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಹಣಕಾಸು ಹಕ್ಕನ್ನು ಕೂಡಾ ರಕ್ಷಿಸಬೇಕು ಎಂದು ಕೋರಿ ಧೋನಿ ಅರ್ಜಿ ಸಲ್ಲಿಸಿದ್ದಾರೆ.

ತನ್ನ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಕಂಪನಿಯ ಕೆಲ ಭೂ ಭಾಗವನ್ನು ತಮಗೆ ಮೀಸಲಿಡಬೇಕು ಎಂದು ಧೋನಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News