ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲಿರುವ 111 ರೈತರಿಗೆ ಬೆದರಿದ ಬಿಜೆಪಿ ಮಾಡಿದ್ದೇನು ಗೊತ್ತಾ?

Update: 2019-03-27 08:20 GMT

ಹೊಸದಿಲ್ಲಿ, ಮಾ.27: ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುವುದಾಗಿ ತಮಿಳುನಾಡಿನ 111 ಮಂದಿ ರೈತರು ಘೋಷಿಸಿದ ಬೆನ್ನಲ್ಲೇ ಹಿರಿಯ ಬಿಜೆಪಿ ನಾಯಕರು ಈ ರೈತರನ್ನು ಸಂಪರ್ಕಿಸಿ ಸ್ಪರ್ಧಿಸುವ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅವುಗಳನ್ನು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಆಶ್ವಾಸನೆ ಕೂಡ ನೀಡಿದ್ದಾರೆ.

ರೈತರ ನಾಯಕ ಪಿ. ಅಯ್ಯಾಕಣ್ಣು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕನ್ಯಾಕುಮಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರ ಸಹಿತ ಹಲವು ಹಿರಿಯ ನಾಯಕರು ತಮ್ಮನ್ನು ಸಂಪರ್ಕಿಸಿದ್ದರೆಂದು ಮಾಹಿತಿ ನೀಡಿದ್ದಾರೆ.

ಈ ರೈತರು ತಮ್ಮ ನಾಮಪತ್ರ ಸಲ್ಲಿಸಿ ಅಘೋರಿ ಸಾಧುಗಳ ಹಾಗೆ ಮೋದಿ ವಿರುದ್ಧ ಪ್ರಚಾರ ಕೈಗೊಳ್ಳುವ ಉದ್ದೇಶ ಹೊಂದಿದ್ದರು. “ನಮ್ಮ ಯೋಜನೆ ಅದೇ ಆಗಿದೆ. ನಾವು ಅಲ್ಲಿ ಅಘೋರಿಗಳಾಗಿ ಹೋಗುತ್ತೇವೆ. ನೂರಾರು ಸ್ಥಳೀಯ ಅಘೋರಿಗಳು ನಮ್ಮ ಜತೆ ಕೈಜೋಡಿಸುತ್ತಾರೆ. ನಗ್ನವಾಗಿ ನಾವು ರೈತರಿಗೆ ನ್ಯಾಯಕ್ಕಾಗಿ ಅಭಿಯಾನ ನಡೆಸುತ್ತೇವೆ” ಎಂದು ಅಯ್ಯಾಕಣ್ಣು ಹೇಳಿದ್ದು, ರೈತರು ಬಿಜೆಪಿ ನಾಯಕತ್ವದಿಂದ ಅಂತಿಮ ಮಾತಿಗಾಗಿ ಈಗಲೂ ಕಾಯುತ್ತಿದ್ದಾರೆ ಎಂದಿದ್ದಾರೆ.

ರೈತರ ಬೇಡಿಕೆಗಳಾದ ಎಲ್ಲಾ ರೈತರ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಹಾಗೂ ರೈತರಿಗೆ ಮಾಸಿಕ ರೂ 5,000 ಪಿಂಚಣಿಯ ಬೇಡಿಕೆಗಳನ್ನು ಒಪ್ಪಿ ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸಿದರೆ ಮಾತ್ರ ತಮ್ಮ ವಾರಣಾಸಿ ಪ್ರತಿಭಟನೆಯನ್ನು ವಾಪಸ್ ಪಡೆಯುವ ಬಗ್ಗೆ ರೈತರು ಯೋಚಿಸಬಹುದು ಎಂದು ಅವರು ತಿಳಿಸಿದ್ದಾರೆ.

“ರಾಧಾಕೃಷ್ಣನ್ ಸಹಿತ ಹಲವು ಬಿಜೆಪಿ ನಾಯಕರು ನಮ್ಮ ಜತೆ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ನಾವು ಮೋದಿ ಅಥವಾ ಯಾವುದೇ ರಾಜಕಾರಣಿಯ ವಿರುದ್ಧವಲ್ಲ, ನಮಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ನಮ್ಮ ಬೇಡಿಕೆಗಳು ರೈತರಿಗಾಗಿ, ನಮ್ಮ ಸಮಸ್ಯೆ ಸರಕಾರಿ ನೀತಿಗಳ ಬಗ್ಗೆ. ನಮ್ಮನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ದಿಲ್ಲಿಯಲ್ಲಿ ಭೇಟಿಯಾಗುತ್ತಾರೆಂದು ನಮಗೆ  ತಿಳಿಸಲಾಗಿದೆ ಹಾಗೂ ನಮ್ಮ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದೂ ಹೇಳಲಾಗಿದೆ. ಅದು ನಡೆದರೆ  ವಾರಣಾಸಿಯಲ್ಲಿ 111 ಮಂದಿ ಚುನಾವಣೆ ಸ್ಪರ್ಧಿಸುವ ಯೋಜನೆ ವಾಪಸ್ ಪಡೆಯಲು ಒಪ್ಪುತ್ತೇವೆ” ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News