ಚಿತ್ರಹಿಂಸೆ ನೀಡಿ ಕಾಲಿನಡಿಯ ಚರ್ಮ ಕಿತ್ತು, ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ ಅರಣ್ಯಾಧಿಕಾರಿಗಳು: ಆರೋಪ

Update: 2019-03-27 11:46 GMT

ಭಟ್ಕಳ, ಮಾ.27: ಪ್ರವಾಸಕ್ಕೆಂದು ತೆರಳಿದ್ದ ಇಬ್ಬರು ಯುವಕರಿಗೆ ಚಿತ್ರಹಿಂಸೆ ನೀಡಿ, ಅಮಾನುಷವಾಗಿ ಹಲ್ಲೆ ನಡೆಸಿರುವ ಆರೋಪದಲ್ಲಿ ಇಲ್ಲಿನ 20ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಸೆಕ್ಷನ್ 143, 147, 149, 341, 324, 504, 506 ಅಡಿ ಎಸಿಎಫ್ ಬಾಲಚಂದ್ರ, ಆರ್ ಎಫ್ ಒ ಶಂಕರ್ ಗೌಡ, ಮನ್ಕಿ ಆರ್ ಎಫ್ ಒ, ಸಂತೋಷ್, ರವಿ ಹಾಗು ಇತರರು ಸೇರಿ ಹಲವು ಅಧಿಕಾರಿಗಳ ವಿರುದ್ಧ ಮನ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಡ್ಕೂರ್ ಗ್ರಾಮಕ್ಕೆ ಪ್ರವಾಸಕ್ಕೆ ತೆರಳಿ ಅಲ್ಲಿಂದ ಭಟ್ಕಳಕ್ಕೆ ಹಿಂದಿರುಗುತ್ತಿದ್ದಾಗ ಅರಣ್ಯಾಧಿಕಾರಿಗಳು ತಡೆದಿದ್ದರು. ನಂತರ ಇಬ್ಬರ ವಿರುದ್ಧವೂ ವನ್ಯಜೀವಿ ಆರೋಪ ಹೊರಿಸಿ ಕಚೇರಿಗೆ ಕರೆದೊಯ್ಯಲಾಯಿತು ಎಂದು ದೂರುದಾರ ಉಮೈರ್ ಸಯೀದ್ ರುಕ್ನುದ್ದೀನ್ ಆರೋಪಿಸಿದ್ದಾರೆ.

ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಯಿತು, ಥರ್ಡ್ ಡಿಗ್ರಿ ಚಿತ್ರಹಿಂಸೆ ನೀಡಲಾಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

“ನಾವೇ ಪ್ರಾಣಿಗಳನ್ನು ಬೇಟೆಯಾಡಿದ್ದೇವೆ ಎನ್ನುವಂತಾಗಲು ಯಾರೋ ಬೇಟೆಯಾಡಿದ ಪ್ರಾಣಿಗಳ ಕಳೇಬರಗಳೊಂದಿಗೆ ಫೋಟೊ ತೆಗೆಯಲಾಯಿತು. ಇಡೀ ದಿನ ನಮಗೆ ಚಿತ್ರಹಿಂಸೆ ನೀಡಲಾಯಿತು. ರಕ್ತ ಹೆಪ್ಪುಗಟ್ಟುವವರೆಗೂ ನಮಗೆ ಥಳಿಸಿದರು. ಪ್ರಾಣಿಗಳನ್ನು ಬೇಟೆಯಾಡಿದ್ದು ನಾವೇ ಎಂದು ಒಪ್ಪದಿದ್ದಲ್ಲಿ ನಮ್ಮ ಖಾಸಗಿ ಅಂಗಗಳಿಗೆ ಆ್ಯಸಿಡ್ ಸುರಿಯುವುದಾಗಿ ಬೆದರಿಸಿದರು. ಶಂಕರ್ ಗೌಡ ಎಂಬ ಅಧಿಕಾರಿ ನಮ್ಮನ್ನು ಬೆದರಿಸಲು ರಿವಾಲ್ವರನ್ನು ಉಪಯೋಗಿಸಿದರು. ನನ್ನ ತಲೆಗೆ ಮೂರು ಬುಲೆಟ್ ಗಳಿದ್ದ ರಿವಾಲ್ವರ್ ಇಟ್ಟು ಟ್ರಿಗರ್ ಎಳೆದು ಬೆದರಿಸಿದರು. ಸ್ಟೀಲ್ ರಾಡ್ ಗಳು, ರೈಫಲ್ ಗಳು, ಬಿದಿರಿನ ದೊಣ್ಣೆಗಳು, ಕುರ್ಚಿಗಳಿಂದ ನಮ್ಮ ಮೇಲೆ ಹಲ್ಲೆ ನಡೆಸಿದರು. ನಮ್ಮನ್ನು ಕುರ್ಚಿಗೆ ಕಟ್ಟಲಾಗಿತ್ತು” ಎಂದು ಉಮೈರ್ ಆರೋಪಿಸಿದ್ದಾರೆ.

ಅದೇ ರಾತ್ರಿ ಇಬ್ಬರನ್ನೂ ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇಬ್ಬರಿಗೂ ವೈದ್ಯರು ‘ಮೆಡಿಕಲಿ ಫಿಟ್’ ಎಂದು ಸರ್ಟಿಫಿಕೆಟ್ ನೀಡಿದರು ಎನ್ನಲಾಗಿದೆ.

“ಆಸ್ಪತ್ರೆಯಿಂದ ನಮ್ಮನ್ನು ನೇರವಾಗಿ ಕಾರವಾರ ಜೈಲಿಗೆ ಕರೆದೊಯ್ಯಲಾಯಿತು. ನಮ್ಮ ಪರಿಸ್ಥಿತಿಯನ್ನು ಕಂಡು ಜೈಲು ಅಧಿಕಾರಿಗಳು ನಮ್ಮನ್ನು ಒಳಕ್ಕೆ ಬಿಡಲಿಲ್ಲ. ಆದರೆ ಅರಣ್ಯಾಧಿಕಾರಿಗಳು ಈ ಬಗ್ಗೆ ಮಾತುಕತೆ ನಡೆಸಿ ನಮ್ಮನ್ನು ಜೈಲಿನಲ್ಲಿರಿಸಿದರು. ಮರುದಿನ ಬೆಳಗ್ಗೆ ನಮ್ಮನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಒಯ್ಯಲಾಗಿದ್ದು, ಅಲ್ಲಿನ ವೈದ್ಯರು ತಕ್ಷಣ ಹೆಚ್ಚಿನ ಚಿಕಿತ್ಸೆ ನೀಡುವಂತೆ ಸೂಚಿಸಿದರು” ಎಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಮೈರ್ ಹೇಳಿದ್ದಾರೆ.

ಬಂಧನಕ್ಕೊಳಗಾದ ಒಂದು ವಾರದ ನಂತರ ಉಮೈರ್ ರಿಗೆ ಜಾಮೀನು ಲಭಿಸಿತು. ನಂತರ ಅವರು ಭಟ್ಕಳ ತಾಲೂಕು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ತೆರಳಿದರು. ಅಲ್ಲಿನ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಮಂಗಳೂರಿನಲ್ಲಿ ಚಿಕಿತ್ಸೆ ಪಡೆದ ನಂತರ ಉಮೈರ್ ಎಫ್ ಐಆರ್ ದಾಖಲಿಸಿದರು.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಮೈರ್ ರ ಕುಟುಂಬಸ್ಥರು ಮತ್ತು ಸ್ನೇಹಿತರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News