ಮೋದಿ ಸರಕಾರದ ಚುನಾವಣಾ ಬಾಂಡ್, ವಿದೇಶಿ ದೇಣಿಗೆ ಹೆಚ್ಚಳ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಟೀಕಿಸಿದ ಚು.ಆಯೋಗ

Update: 2019-03-27 18:04 GMT

ಹೊಸದಿಲ್ಲಿ,ಮಾ.27: ದೇಶದಲ್ಲಿ ಚುನಾವಣೆಗಳ ಮೇಲೆ ಕಾರ್ಪೊರೇಟ್ ಪ್ರಭಾವದ ವಿರುದ್ಧ ಕಾನೂನು ಸಮರಕ್ಕೆ ರಂಗವನ್ನು ಸಜ್ಜುಗೊಳಿಸುವ ನಡೆಯೊಂದರಲ್ಲಿ ಚುನಾವಣಾ ಆಯೋಗವು ನರೇಂದ್ರ ಮೋದಿ ಸರಕಾರದ ಚುನಾವಣಾ ಬಾಂಡ್ ಯೋಜನೆ ಮತ್ತು ಭಾರತೀಯ ರಾಜಕೀಯ ಪಕ್ಷಗಳಿಗೆ ವಿದೇಶಿ ದೇಣಿಗೆಗಳಿಗೆ ಅವಕಾಶ ನೀಡುವ ನಿರ್ಧಾರವನ್ನು ಟೀಕಿಸಿದೆ.

ಚುನಾವಣಾ ಬಾಂಡ್ ಯೋಜನೆ ಮತ್ತು ಕಾರ್ಪೊರೇಟ್ ದೇಣಿಗೆಗಳ ಮೇಲಿನ ಮಿತಿಯನ್ನು ತೆಗೆದುಹಾಕಿರುವುದು ರಾಜಕೀಯ ಹಣಕಾಸು/ರಾಜಕೀಯ ಪಕ್ಷಗಳಿಗೆ ದೇಣಿಗೆಯ ಪಾರದರ್ಶಕತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದಾವತ್ತಿನಲ್ಲಿ ಚುನಾವಣಾ ಆಯೋಗವು ಹೇಳಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿಯನ್ನು ತರುವ ಕೇಂದ್ರದ ನಿರ್ಧಾರ ಕುರಿತಂತೆ ಆಯೋಗವು,ಇದು ಭಾರತದಲ್ಲಿಯ ರಾಜಕೀಯ ಪಕ್ಷಗಳಿಗೆ ಅನಿಯಂತ್ರಿತ ವಿದೇಶಿ ದೇಣಿಗೆಗಳು ಹರಿದುಬರಲು ಅವಕಾಶವನ್ನು ನೀಡುತ್ತದೆ ಮತ್ತು ಇದು ಭಾರತೀಯ ನೀತಿಗಳು ವಿದೇಶಿ ಕಂಪನಿಗಳ ಪ್ರಭಾವಕ್ಕೊಳಗಾಗಲು ಕಾರಣವಾಗಬಹುದು ಎಂದು ಬೆಟ್ಟು ಮಾಡಿದೆ.

ಭಾರತದಲ್ಲಿ ಚುನಾವಣಾ ಪ್ರಚಾರಕ್ಕೆ ಹಣಕಾಸು ದೇಣಿಗೆಗಳ ಚಿತ್ರಣವನ್ನು ಬದಲಿಸಿರುವ ಹಲವಾರು ಶಾಸನಾತ್ಮಕ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಎನ್‌ಜಿಒಗಳು ಮತ್ತು ಸಿಪಿಎಂ ಸಲ್ಲಿಸಿರುವ ಹಲವಾರು ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದ್ದು,ಮುಂದಿನ ವಿಚಾರಣೆಯನ್ನು ಎ.2ಕ್ಕೆ ನಿಗದಿಗೊಳಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯ ಅಂಗವಾಗಿ ಚುನಾವಣಾ ಆಯೋಗವು ತನ್ನ ಸ್ವಂತ ಅಫಿದಾವತ್ತನ್ನು ಸಲ್ಲಿಸಿದ್ದು,ಚುನಾವಣಾ ಬಾಂಡ್ ಯೋಜನೆಗೆ ತನ್ನ ವಿರೋಧವನ್ನು ಅದು ಪುನರುಚ್ಚರಿಸಿದೆ. ಅಲ್ಲದೆ ಹೆಚ್ಚಿನ ಪಾರದರ್ಶಕತೆಯನ್ನು ತರುವ ಅಗತ್ಯ ಕುರಿತು ತಾನು ಭಾರತ ಸರಕಾರಕ್ಕೆ ಕಳೆದ 15 ವರ್ಷಗಳಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿರುವುದಾಗಿ ಬೆಟ್ಟು ಮಾಡಿದೆ.

ತಾನು ಸಾಂವಿಧಾನಿಕ ಪ್ರಾಧಿಕಾರವಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯದ ಎದುರಿನಲ್ಲಿರುವ ಹಾಲಿ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಯಾವುದೇ ಒಂದು ಪಕ್ಷವನ್ನು ಬೆಂಬಲಿಸಲು ತಾನು ಉದ್ದೇಶಿಸಿಲ್ಲ ಎಂದು ಆಯೋಗವು ಸ್ಪಷ್ಟಪಡಿಸಿದೆ.

ಚುನಾವಣಾ ಬಾಂಡ್‌ಗಳು ಮತ್ತು ಕಾರ್ಪೊರೇಟ್ ದೇಣಿಗೆಗೆ ಆಕ್ಷೇಪ ವ್ಯಕ್ತಪಡಿಸಿ ತಾನು ಮೋದಿ ಸರಕಾರಕ್ಕೆ 2017ರ ಆರಂಭದಲ್ಲಿ ಬರೆದಿದ್ದ ಎರಡು ಪತ್ರಗಳನ್ನೂ ಆಯೋಗವು ತನ್ನ ಅಫಿದಾವತ್ತಿನೊಂದಿಗೆ ಲಗತ್ತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News