"ಅಡ್ವಾಣಿಯವರನ್ನು ಅವಮಾನಿಸಿದ್ದಕ್ಕೆ ಜನತೆ ಸೂಕ್ತ ಉತ್ತರ ನೀಡದಿರಲಿ, ನಿಮ್ಮನ್ನು ದೇವರು ಕ್ಷಮಿಸಲಿ"

Update: 2019-03-28 06:52 GMT

ಹೊಸದಿಲ್ಲಿ, ಮಾ.28: ಹಿರಿಯ ಬಿಜೆಪಿ ಮುಖಂಡ ಲಾಲ್‌ಕೃಷ್ಣ ಅಡ್ವಾಣಿಯವರನ್ನು ಅವಮಾನಿಸಿದ ಬಿಜೆಪಿ ಮುಖಂಡರ ಕ್ರಮವನ್ನು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕಟುವಾಗಿ ಟೀಕಿಸಿದ್ದಾರೆ. ಹಿರಿಯ ನಾಯಕನನ್ನು ಚುನಾವಣಾ ರಾಜಕೀಯದಿಂದ ನಿರ್ಗಮಿಸುವಂತೆ ಮಾಡಿರುವ ಕ್ರಮ "ಕೀಳು ಅಭಿರುಚಿಯದ್ದು ಮತ್ತು ವಿಷಾದನೀಯ" ಎಂದು ಹೇಳಿದ್ದಾರೆ.

ನಾಲ್ಕು ಭಾಗಗಳ ಸರಣಿ ಟ್ವೀಟ್‌ನಲ್ಲಿ ಅಡ್ವಾಣಿಯರವನ್ನು ಪಿತೃಸಮಾನ, ಚಿಂತಕ, ಮಾರ್ಗದರ್ಶಿ, ಗುರು ಹಾಗೂ ಬಿಜೆಪಿಯ ಮಹಾನ್ ನಾಯಕ ಎಂದು ಅವರು ಬಣ್ಣಿಸಿದ್ದಾರೆ. ಅವರ ಒಪ್ಪಿಗೆ ಹಾಗೂ ಸಮ್ಮತಿ ಇಲ್ಲದೇ ಅವರಿಗೆ ನಿರ್ಗಮನ ದಾರಿ ತೋರಿರುವುದು ಖಂಡನೀಯ ಎಂದು ಟೀಕಿಸಿದ್ದಾರೆ.

ಬಿಜೆಪಿಯ ಮೊದಲ ಪಟ್ಟಿಯಲ್ಲೇ ಗುಜರಾತ್‌ನ ಗಾಂಧಿನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಲ್.ಕೆ.ಅಡ್ವಾಣಿಯವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಕ್ಷೇತ್ರದಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಈ ಕ್ರಮ ದೇಶದ ಬಹಳಷ್ಟು ಮಂದಿಗೆ ಆಘಾತ ಮತ್ತು ಅಸಮಾಧಾನ ತಂದಿದೆ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

"ಈ ಮಹತ್ವದ ಕಾಲಘಟ್ಟದಲ್ಲಿ ಅಡ್ವಾಣಿಯವರ ರಾಜಕೀಯ ವೃತ್ತಿಯಲ್ಲೇ ಇದು ಅತ್ಯಂತ ಆಘಾತಕಾರಿ ಕ್ಷಣ. ವನ್ ಮ್ಯಾನ್ ಶೋ & 2 ಮ್ಯಾನ್ ಆರ್ಮಿಯ ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ಇದು ಸಾಧ್ಯ. ಇದು ಅಗೌರವಯುತ ಮಾತ್ರವಲ್ಲದೇ ಕೀಳು ಅಭಿರುಚಿಯ ಕ್ರಮ. ಎಲ್.ಕೆ.ಅಡ್ವಾಣಿಯವರ ಜತೆಗೆ ಮುರಳಿ ಮನೋಹರ ಜೋಶಿ, ಶಾಂತ್‌ಕುಮಾರ್ ಅವರನ್ನೂ ಸಂಪೂರ್ಣವಾಗಿ ಅವಮಾನಿಸಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

"ಇದು ಇಡೀ ದೇಶಕ್ಕೆ ನೋವು ಉಂಟು ಮಾಡಿದೆ. ಜನರಿಗೆ ದಿಗಿಲು ಉಂಟಾಗಿದೆ. ಪಕ್ಷದ ಹಿರಿಯ ಮುಖಂಡರಿಗೆ ಅವಮಾನಿಸಿದ ಈ ಅನ್ಯಾಯಕ್ಕೆ ಚುನಾವಣೆಯಲ್ಲಿ ಜನರು ಸೂಕ್ತ ಉತ್ತರ ನೀಡದಿರಲಿ! ದೇವರು ನಿಮ್ಮನ್ನು ಕ್ಷಮಿಸಲಿ!" ಎಂದು ಸಿನ್ಹಾ ಚುಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News