ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಅಪಹರಣ, ಅತ್ಯಾಚಾರ ಪ್ರಕರಣ!

Update: 2019-03-28 05:16 GMT

ಹಿಸ್ಸಾರ್, ಮಾ.26: ಇಬ್ಬರು ಸ್ನೇಹಿತರ ಜತೆ ಸೇರಿ ಅಪ್ರಾಪ್ತ ವಯಸ್ಸಿನ ಇಬ್ಬರು ಯುವತಿಯರನ್ನು ಅಪಹರಿಸಿ, ಆ ಪೈಕಿ ಒಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಯೊಬ್ಬಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಪಹರಣಕ್ಕೀಡಾದ ಇಬ್ಬರು ಬಾಲಕಿಯರ ಪೈಕಿ ಒಬ್ಬಳಾದ ಹತ್ತನೇ ತರಗತಿಯ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ 11ರಂದು ಈ ಆರೋಪಿ ಯುವತಿ, ಈ ವಿದ್ಯಾರ್ಥಿನಿ ಹಾಗೂ ಅದೇ ಶಾಲೆಯಲ್ಲಿ ಓದುತ್ತಿದ್ದ ಮತ್ತೊಬ್ಬಳನ್ನು ತನ್ನ ಮನೆಗೆ ಆಹ್ವಾನಿಸಿದ್ದಳು. ಮನೆಗೆ ತೆರಳಿದ ಬಳಿಕ ಪ್ರವೀಣ್ ಎಂಬಾತನ ಬೈಕ್‌ನಲ್ಲಿ ಈಕೆಯನ್ನು ಹತ್ತಿಸಿ, ನಿಮ್ಮ ಹಿಂದೆಯೇ ನಾವು ಬರುತ್ತೇವೆ. ನೀನು ಬೈಕ್‌ನಲ್ಲಿ ಹೋಗು ಎಂದು ಹೇಳಿದ್ದಾಳೆ. ಪ್ರವೀಣ್ ಇಬ್ಬರನ್ನೂ ಹೋಟೆಲ್ ಒಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆತನ ಸ್ನೇಹಿತ ವಿಜಯ್ ಎಂಬಾತ ಇದ್ದ. ನಿಮ್ಮ ರಕ್ಷಣೆಗೆ ಯಾರೂ ಇಲ್ಲ ಎಂದು ಈ ಇಬ್ಬರು ಬಾಲಕಿಯರಿಗೆ ಬೆದರಿಸಿ, ಆ ಪೈಕಿ ಒಬ್ಬಳನ್ನು ಮತ್ತೊಂದು ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯದ ಫೋಟೊ ಕೂಡಾ ಸೆರೆ ಹಿಡಿದಿದ್ದಾನೆ. ಈ ಮಧ್ಯೆ ದೂರು ನೀಡಿದ ವಿದ್ಯಾರ್ಥಿನಿ ಪ್ರವೀಣ್ ಜತೆ ಹೋರಾಡಿ ಅತ್ಯಾಚಾರದಿಂದ ತಪ್ಪಿಸಿಕೊಂಡಿದ್ದಾಳೆ. ಆದರೆ ಆಕ್ಷೇಪಾರ್ಹ ಫೋಟೊಗಳನ್ನು ಆತ ಕ್ಲಿಕ್ಕಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಪೊಲೀಸರಿಗೆ ವಿಷಯ ತಿಳಿಸಿದರೆ ಈ ಫೋಟೊಗಳನ್ನು ಬಹಿರಂಗಪಪಡಿಸುವುದಾಗಿ ಯುವಕರು ಬೆದರಿಕೆ ಹಾಕಿದ್ದಾರೆ.

ಮಾರ್ಚ್ 25ರಂದು ಆರೋಪಿ ಯುವತಿ ಮತ್ತೆ ಪ್ರವೀಣ್‌ನನ್ನು ಕರೆಸಿಕೊಂಡಿದ್ದಾಳೆ. ಆದರೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತನನ್ನು ಭೇಟಿ ಮಾಡಲು ನಿರಾಕರಿಸಿದ್ದಳು. ಈ ಮಧ್ಯೆ ವಿಜಯ್ ಹಾಗೂ ಪ್ರವೀಣ್, ಇಬ್ಬರು ವಿದ್ಯಾರ್ಥಿನಿಯರ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು, ವೈರಲ್ ಆಗಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಸಂಚಿನಲ್ಲಿ ಶಾಮೀಲಾದ ಅಪ್ರಾಪ್ತ ವಯಸ್ಸಿನ ಯುವತಿ ಹಾಗೂ ಮೂವರು ಯುವಕರ ಮೇಲೆ ಪೊಲೀಸರು ಅಪಹರಣ, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News