ಐಟಿ ಇಲಾಖೆಯ ಕೆಲಸದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಿಲ್ಲ: ಶಾಸಕ ಸಿ.ಟಿ ರವಿ

Update: 2019-03-28 12:27 GMT

ಚಿಕ್ಕಮಗಳೂರು, ಮಾ.28: ಐಟಿ ದಾಳಿಗೂ ಕೇಂದ್ರ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರಕಾರ ಐಟಿ ಇಲಾಖೆಯ ಕೆಲಸದಲ್ಲಿ ಹಸ್ತಕ್ಷೇಪವನ್ನೂ ಮಾಡಿಲ್ಲ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು ಯಾಕೆ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ದೇವೇಗೌಡ ಕುಟುಂಬದ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಕೆಲವರು ಎತ್ತಿನಗಾಡಿ ಮೇಲೆ ಬಂದು ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ಯಾವುದೇ ವ್ಯವಹಾರ ಆದರೂ ನನಗೆ ಇರುವುದು ನಾಲ್ಕು ಎಕರೆ ಜಮೀನು ಮಾತ್ರ ಎನ್ನುತ್ತಾರೆ. ಆದರೆ ಹೀಗೆ ಹೇಳುವವರೇ ಬೆಂಗಳೂರಿನಲ್ಲಿ ನೂರಾರು ಕೋಟಿಯ ಕಂಪೆನಿ, ಆಸ್ತಿ ಪಾಸ್ತಿ ಮಾಡುತ್ತಾರೆ. ಹತ್ತಾರು ಮನೆ ಮಾಡುತ್ತಾರೆ. ಮಕ್ಕಳು, ಮೊಮ್ಮಕ್ಕಳ ಹೆಸರಿನಲ್ಲೂ ನೂರಾರು ಕೋಟಿ ಆಸ್ತಿ ಮಾಡುತ್ತಾರೆಂದ ಅವರು, ಯಾರ್ಯಾರು ಹೀಗೆ ಹಣ ಸಂಪಾದನೆ ಮಾಡಿದ್ದಾರೆಂದು ನಾನು ಹೆಸರು ಹೇಳುವುದಿಲ್ಲ. ಅದು ಜನರಿಗೆ ತಿಳಿದಿದೆ ಎಂದು ಆರೋಪಿಸಿದರು.

ಐಟಿ ದಾಳಿಗೂ ಕೇಂದ್ರ ಸರಕಾರಕ್ಕೂ ಸಂಬಂಧ ಇಲ್ಲ. ಈ ದಾಳಿಯನ್ನು ರಾಜಕೀಯಗೊಳಿಸಿದರೆ ಪ್ರಾಮಾಣಿಕತೆ ಎನ್ನುವುದಕ್ಕೆ ಅರ್ಥವಿರಲ್ಲ. ಐಟಿ ಇಲಾಖೆ ಬಿಜೆಪಿಯದ್ದಲ್ಲ. ಅದು ಬಿಜೆಪಿಯ ವಿಂಗ್ ಅಲ್ಲ, ಅದು ಸ್ವಾಯತ್ತ ಸಂಸ್ಥೆಯಾಗಿದೆ. ಆದರೆ ಸಿಎಂ ಅದನ್ನು ರಾಜಕೀಯಗೊಳಿಸುವಂತಹ ಹೇಳಿಕೆ ನೀಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News