ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಹಿನ್ನೋಟ: ಮೊದಲ ಬಾರಿ ಅಭ್ಯರ್ಥಿ ಕಣಕ್ಕಿಳಿಸದ ಕಾಂಗ್ರೆಸ್

Update: 2019-03-28 18:32 GMT

ಚಿಕ್ಕಮಗಳೂರು, ಮಾ.28: ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ-2019ರ ಮತದಾನ ದಿನಾಂಕ ಸಮೀಪಿಸುತ್ತಿರುವಂತೆ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಣ ಕಾವು ಪಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್, ಬಿಎಸ್ಪಿ, ಸಿಪಿಐಎಂಎಲ್ ರೆಡ್‍ಸ್ಟಾರ್ ಪಕ್ಷಗಳ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎ.18ರಂದು ಈ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದು, ಬಿಜೆಪಿ-ಜೆಡಿಎಸ್ ನಡುವೆ ನೇರಾ ಹಣಾಹಣಿ ನಿರೀಕ್ಷಿಸಲಾಗಿದೆ. ಕ್ಷೇತ್ರದ ಲೋಕಸಭೆ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಇದುವರೆಗೆ 19 ಲೋಕಸಭೆ ಚುನಾವಣೆಗಳು ನಡೆದಿದ್ದು, ಈ ಪೈಕಿ ಎರಡು ಬಾರಿ ಉಪಚುನಾವಣೆ ನಡೆದಿದೆ. 1952ರಲ್ಲಿ ಹಾಸನ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಚ್.ಸಿದ್ದನಂಜಪ್ಪ ಅವರು 1,16,561 ಮತಗಳನ್ನು ಪಡೆದು ಸಂಸದರಾಗಿ ಆಯ್ಕೆಗೊಂಡಿದ್ದರು. ಈ ಚುನಾವಣೆ ನಡೆದ ಸಂದರ್ಭದಲ್ಲಿ ಕ್ಷೇತ್ರದಲ್ಲಿ 3,54,206 ಮತದಾರರಿದ್ದು, 1,71,850 ಮಂದಿ ತಮ್ಮ ಮತ ಚಲಾಯಿಸಿದ್ದರು. ಈ ಚುನಾವಣೆಯಲ್ಲಿ ಎಸ್‍ಒಪಿ ಪಕ್ಷದ ಶಿವಪ್ಪ ಎರಡನೇ ಸ್ಥಾನ ಪಡೆದಿದ್ದರು. 1957ರಲ್ಲಿ ನಡೆದ 2ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಚ್.ಸಿದ್ದನಂಜಪ್ಪ ಅವರು ಎರಡನೇ ಬಾರಿಗೆ ಅವಿರೋಧವಾಗಿ ಸಂಸದರಾಗಿ ಆಯ್ಕೆಯಾಗಿದ್ದರೆ 1962ರಲ್ಲಿ ನಡೆದ ಮೂರನೇ ಲೋಕಸಭೆ ಚುನಾವಣೆಯಲ್ಲೂ ಎಚ್.ಸಿದ್ದನಂಜಪ್ಪ ಸತತ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಕಂಡಿದ್ದರು.

1967ರಲ್ಲಿ ಹಾಸನ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವಾಗಿ ರಚನೆಯಾಗಿತ್ತು. ಈ ಅವಧಿಯಲ್ಲಿ ನಡೆದ 4ನೇ ಲೋಕಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಥಮ ಬಾರಿಗೆ ಸೋಲಿನ ರುಚಿ ಕಂಡಿತು. ಈ ಚುನಾವಣೆಯಲ್ಲಿ ಪಿಎಸ್‍ಪಿ ಪಕ್ಷದ ಎಂಹುಚ್ಚೇಗೌಡ 1,06,812 ಮತಗಳನ್ನು ಪಡೆದು ಕಾಂಗ್ರೆಸ್‍ನ ಎಂ.ಎಂ.ಬಸವೇಗೌಡ ಅವರನ್ನು ಸೋಲಿಸಿ ಸಂಸದರಾಗಿದ್ದರು.

1971ರಲ್ಲಿ ಇದೇ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ನಡೆದ 5ನೇ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‍ಸಿಜೆ ಪಕ್ಷದ ಡಿ.ಬಿ.ಚಂದ್ರೇಗೌಡ ಅವರು 1,88,151 ಮತಗಳಿಂದ ವಿಜೇತರಾಗಿದ್ದರೆ, 1977ರಲ್ಲಿ ನಡೆದ 6ನೇ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಡಿ.ಬಿ.ಚಂದ್ರೇಗೌಡ ಅವರು 2,08,239 ಮತಗಳನ್ನು ಪಡೆದು ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ವಿಜೇತರಾಗಿದ್ದರು. 

1980ರಲ್ಲಿ ನಡೆದ 8ನೇ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಿ.ಎಂ.ಪುಟ್ಟೇಗೌಡ 2,39,522 ಮತಗಳನ್ನು ಪಡೆದು ಸಂಸದರಾಗಿದ್ದರೆ, 1984ರಲ್ಲಿ ನಡೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಡಿ.ಕೆ.ತಾರಾದೇವಿ 2,68,912 ಮತಗಳಿಂದ ಗೆಲುವು ಕಂಡಿದ್ದರು. 1989ರಲ್ಲಿ ನಡೆದ 9ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಿ.ಎಂ.ಪುಟ್ಟೆಗೌಡ ಅವರು ಎರಡನೇ ಬಾರಿಗೆ ಗೆಲುವು ದಾಖಲಿಸಿ ಸಂಸದರಾಗಿದ್ದರು. ಈ ಚುನಾವಣೆಯಲ್ಲಿ ಅವರು 3,03,195 ಮತಗಳಿಸಿದ್ದರು. 1991ರಲ್ಲಿ ನಡೆದ 10ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಡಿ.ಕೆ.ತಾರಾದೇವಿ ಅವರು ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. 

1996 ರಲ್ಲಿ ನಡೆದ 11ನೇ ಲೋಕಾ ಚುನಾವಣೆಯಲ್ಲಿ ಜನತಾ ದಳದ ಬಿ.ಎಲ್.ಶಂಕರ್ 1,95,857 ಮತಗಳನ್ನು ಪಡೆದು ಕಾಂಗ್ರೆಸ್‍ನ ಡಿ.ಕೆ.ತಾರಾದೇವಿ ಅವರನ್ನು ಸೋಲಿಸಿದ್ದರು. ಈ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಆರ್.ಲಕ್ಷ್ಮಣ್‍ಗೌಡ ಅವರು 1,51,949 ಮತಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದರು.

ಪ್ರಥಮ ಬಾರಿಗೆ ಖಾತೆ ತೆರದ ಬಿಜೆಪಿ; ಶ್ರೀಕಂಠಪ್ಪ ಹ್ಯಾಟ್ರಿಕ್
1998ರಲ್ಲಿ ನಡೆದ 12ನೇ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ ಅವರು 3,16,137 ಮತಗಳನ್ನು ಪಡೆದು ಸಂಸದರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವೀರಪ್ಪಮೊಯ್ಲಿ ಅವರು 2,63,641 ಮತಗಳನ್ನು ಪಡೆದಿದ್ದರು. 1999ರ 13 ನೇ ಲೋಕಾ ಚುನಾವಣೆಯಲ್ಲಿ ಬಿಜೆಪಿ ಡಿ.ಸಿ.ಶ್ರೀಕಂಠಪ್ಪ 3,24,470 ಮತಗಳನ್ನು ಪಡೆದು ಮತ್ತೆ ಸಂಸದರಾಗಿ ಆಯ್ಕೆಯಾಗಿದ್ದರೆ, 2004ರಲ್ಲಿ ನಡೆದ 14ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ ಅವರು ಸತತ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಪುನರ್ವಿಂಗಡಣೆ:
2009ರಲ್ಲಿ ಚಿಕ್ಕಮಗಳೂರು ಕ್ಷೇತ್ರದ ಪುನರ್ವಿಂಗಡಣೆ ನಡೆದು ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಸೇರಿಸಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ರೂಪುಗೊಂಡಿದ್ದು, ಈ ಅವಧಿಯಲ್ಲಿ 12,03,466 ಸಾವಿರ ಮತದಾರರಿದ್ದು, ಈ ಪೈಕಿ 8,52,824 ಮತದಾರರು ಮತ ಚಲಾಯಿಸಿದ್ದರು. ಈ ವಧಿಯಲ್ಲಿ ನಡೆದ 15ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡ ಅವರು 4,01,441 ಮತಗಳನ್ನು ಪಡೆದು ಸಂಸದರಾದರೆ, ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆ 3,74,423 ಮತಗಳನ್ನು ಪಡೆದು ಸೋಲುಂಡಿದ್ದರು. 

2009ರಲ್ಲಿ ಸಂದರಾಗಿ ಆಯ್ಕೆಯಾಗಿದ್ದ ಸದಾನಂದಗೌಡ ಅವರು ಐದು ವರ್ಷಗಳ ಅವಧಿಗೂ ಮುನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ 2012ರಲ್ಲಿ ಉಪಚುನಾವಣೆ ನಡೆಯಿತು. ಈ ಅವಧಿಯಲ್ಲಿ ನಡೆದ 16ನೇ ಲೋಕಸಭೆ ಚುನಾವಣೆ ಹಾಗೂ ಎರಡನೇ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆ 3,98,723 ಮತಗಳಿಂದ ಜಯಗಳಿಸಿದ್ದರು. 2014ರಲ್ಲಿ ನಡೆದ 17ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು 5,81,168 ಮತಗಳಿಂದ ಗೆಲುವು ಕಂಡಿದ್ದು, ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆ 39,9525 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು.

ಇದೀಗ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತ್ತೊಂದು ಸಾರ್ವತ್ರಿಕ ಚುನಾವಣೆ ಎದುರಾಗಿದ್ದು, ಚುನಾವಣೆ ನಡೆಸಲು ಚು.ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದರೆ ಕೆಲವೇ ದಿನಗಳು ಬಾಕಿ ಇರುವ ದಿನಗಳಲ್ಲಿ ಮತದಾರರ ಮನಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕಣ್ಗಾವಲಿನ ನಡುವೆಯೂ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

1978 ರಲ್ಲಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ನಡೆದ 7ನೇ ಚುನಾವಣೆ ಹಾಗೂ ಮೊದಲ ಉಪಚುನಾವಣೆ ಐತಿಹಾಸಿಕವಾಗಿ ಮಹತ್ವದ್ದಾಗಿದೆ. ತುರ್ತು ಪರಿಸ್ಥಿತಿಯಿಂದಾಗಿ ರಾಜಕೀಯವಾಗಿ ತೆರೆಮರೆಗೆ ಸರಿಯಲಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗಾಗಿ ಅಂದು ಸಂಸದರಾಗಿದ್ದ ಡಿ.ಬಿಚಂದ್ರೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಕ್ಷೇತ್ರದಲ್ಲಿ ಪ್ರಥಮಬಾರಿಗೆ ಉಪ ಚುನಾವಣೆ ನಡೆಯುವಂತಾಯಿತು. ಮಾಜಿ ಪ್ರಧಾನಿ ಇಂದಿರಾಗಾಂಧಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‍ನ ಇಂದಿರಾಗಾಂಧಿ ವಿರುದ್ಧವಾಗಿ ವೀರೇಂದ್ರ ಪಾಟೀಲ್ ಅವರಂತಹ 27 ಮಂದಿ ರಾಜಕೀಯ ಮುತ್ಸದ್ಧಿಗಳು ಕಣದಲ್ಲಿದ್ದರು. ಈ ಉಪಚುನಾವಣೆಯಲ್ಲಿ ಇಂದಿರಾಗಾಂಧಿ ಅವರು 2,49,376 ಮತಗಳನ್ನು ಗಳಿಸಿ ಅಭೂತಪೂರ್ವ ಗೆಲುವು ದಾಖಲಿಸಿದ್ದರು. ಈ ಚುನಾವಣೆಯಲ್ಲಿ ಜೆಎನ್‍ಪಿ ಪಕ್ಷದಿಂದ ಸ್ಪರ್ಧಿಸಿದ್ದ ವೀರೇಂದ್ರ ಪಾಟೀಲ್ ಅವರು 1,72,043 ಮತಗಳನ್ನು ಗಳಿಸಿದರೆ ಉಳಿದ 26 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 

ಕಾಂಗ್ರೆಸ್-ಬಿಜೆಪಿ ಹ್ಯಾಟ್ರಿಕ್ ಸಾಧನೆ
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆದ 17 ಚುನಾವಣೆಗಳು 2 ಉಪಚುನಾವಣೆಗಳು ನಡೆದಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎಚ್.ಸಿದ್ದನಂಜಪ್ಪ ಅವರು ಮೂರು ಬಾರಿ ಸಂಸದರಾಗಿ ಸತತವಾಗಿ ಆಯ್ಕೆಗೊಂಡಿದ್ದರೆ, ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ ಅವರೂ ಸತತ ಮೂರು ಬಾರಿ ಸಂಸದರಾಗಿ ಹ್ಯಾಟ್ರಿಕ್ ಸಾಧನೆ ಮಾಡಿರುವುದು ದಾಖಲೆಯಾಗಿದೆ. ಇನ್ನು ಕಾಂಗ್ರೆಸ್ ಪಕ್ಷದವರೇ ಆದ ಡಿ.ಕೆ.ತಾರಾದೇವಿ ಹಾಗೂ ಡಿ.ಎಂ.ಪುಟ್ಟೇಗೌಡ ಅವರು ಎರಡೆರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ದಾಖಲೆ ಹೊಂದಿದ್ದಾರೆ. 

ಮೊದಲ ಬಾರಿಗೆ ಕ್ಷೇತ್ರದಲ್ಲಿ ಕೈ ಕೊಟ್ಟ ಕಾಂಗ್ರೆಸ್
ಈ ಲೋಕಸಭೆ ಕ್ಷೇತ್ರದಲ್ಲಿ ನಡೆದ ಚುನಾವಣಾ ಇತಿಹಾಸದಲ್ಲಿ 1952ರಿಂದ 2014ರವರೆಗೆ 17 ಸಾರ್ವತ್ರಿಕ ಚುನಾವಣೆಗಳು ಹಾಗೂ 2 ಉಪಚುನಾವಣೆಗಳು ನಡೆದಿದೆ. ಆರಂಭದಿಂದಲೂ ಕಾಂಗ್ರೆಸ್ ಪಕ್ಷ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಭದ್ರಕೋಟೆಯಾದ ಕಾರಣಕ್ಕೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಬಾರಿ ಗೆಲುವು ಕಂಡಿದ್ದಾರೆ. ಆದರೆ ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹಾಗೂ ಇಂದಿರಾಗಾಂಧಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಜೆಡಿಎಸ್ ಅಭ್ಯರ್ಥಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಜೆಡಿಎಸ್‍ಗೆ ಬೆಂಬಲ ನೀಡಿದ್ದು, ಕಾಂಗ್ರೆಸ್ ಪಕ್ಷದ ಕಟ್ಟಾಳು ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

Writer - ಕೆ.ಎಲ್ ಶಿವು

contributor

Editor - ಕೆ.ಎಲ್ ಶಿವು

contributor

Similar News