ಭಾರತೀಯ ಯೋಗಮೀಮಾಂಸೆಯ ಹಿಂದೆ...

Update: 2019-03-29 18:32 GMT

‘ಯೋಗ’ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಪದ. ರಾಜಕೀಯವಾಗಿ, ಉದ್ಯಮವಾಗಿ, ಸಾಂಸ್ಕೃತಿಕವಾಗಿ ಇದು ಚರ್ಚೆಯಲ್ಲಿದೆ. ಶ್ರೀಮಂತರಿಗೆ ಯೋಗವೆನ್ನುವುದು ‘ಫ್ಯಾಶನ್’ ಆಗಿದೆ. ಯೋಗವನ್ನು ಬೇರೆ ಬೇರೆ ನೆಲೆಗಳಲ್ಲಿ ನೋಡುವವರಿದ್ದಾರೆ. ಯೋಗ ಯಾವುದು ಎನ್ನುವುದರ ಕುರಿತಂತೆಯೇ ಯೋಗ ಪಟುಗಳಲ್ಲಿ ಸ್ಪಷ್ಟತೆ, ಒಮ್ಮತವಿಲ್ಲ. ಯೋಗ ತೀರಾ ಪ್ರಾಚೀನವಾದುದು ಎನ್ನುವುದರ ಕುರಿತಂತೆಯೂ ಭಿನ್ನಮತವಿದೆ. ಹಾಗೆಯೇ ಅದಕ್ಕೊಂದು ಶಾಸ್ತ್ರೀಯ ಹಿನ್ನೆಲೆಯನ್ನು ಕೆಲವರು ನಿರಾಕರಿಸುತ್ತಾರೆ. ನಾಗ ಸಾಧುಗಳಿಂದ ಯೋಗ ಬೆಳೆಯಿತು ಎನ್ನುವವರೂ ಇದ್ದಾರೆ. ಡಾ. ಎನ್ ಎಂ. ಗಿರಿಜಾಪತಿಯವರು ‘ಭಾರತೀಯ ಯೋಗ ಮೀಮಾಂಸೆ’ ಕೃತಿಯಲ್ಲಿ ಅದರ ಹಿನ್ನೆಲೆ ಮುನ್ನೆಲೆಗಳನ್ನು ಕಾಣಿಸುವ ಪ್ರಯತ್ನ ಮಾಡಿದ್ದಾರೆ. ಅವರು ಯೋಗದ ಪ್ರಾಚೀನತೆಯನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದಕ್ಕೊಂದು ಮೀಮಾಂಸೆಯನ್ನು ಬರೆಯುತ್ತಾರೆ.
  ಯೋಗ ಇದು ವೇದ ಪೂರ್ವ ಕಾಲದ ಪ್ರಾಚೀನ ಭಾರತದಲ್ಲಿ ರೂಢಿಗತವಾಗಿದ್ದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸಾಧನೆಗಳ ಜ್ಞಾನ ಶಿಸ್ತು ಎಂದು ಇಲ್ಲಿ ಲೇಖಕರು ಅಭಿಪ್ರಾಯ ಪಡುತ್ತಾರೆ. ಜೊತೆಗೆ ವೈದಿಕ ಮತ್ತು ವೈದಿಕೇತರ ಅಥವಾ ವೇದ ವಿರೋಧಿ ನಿಲುವುಗಳಿಂದ ರೂಪಿತಗೊಂಡ ಮತ, ತತ್ವ ಅವುಗಳನ್ನು ಪ್ರತಿಪಾದಿಸಿದ ಸಿದ್ಧಾಂತಗಳನ್ನು ಅವರು ಬೆಟ್ಟು ಮಾಡುತ್ತಾರೆ. ಯೋಗ ಪದ ನಿಷ್ಪತ್ತಿ ಅದರ ಅರ್ಥ ವ್ಯಾಪ್ತಿ, ಯೋಗಗಳ ಕುರಿತ ವಿವಿಧ ವ್ಯಾಖ್ಯೆಗಳು, ಯೋಗದ ಪ್ರಕಾರಗಳು, ಯೋಗ ಸಾಹಿತ್ಯದ ಬೆಳವಣಿಗೆ, ಯೋಗ ಮೀಮಾಂಸೆಯ ಪ್ರಯೋಜನ ಇತ್ಯಾದಿಗಳನ್ನು ಮೊದಲ ಅಧ್ಯಾಯದಲ್ಲಿ ಲೇಖಕರು ಚರ್ಚಿಸುತ್ತಾರೆ. ಎರಡನೆ ಅಧ್ಯಾಯದಲ್ಲಿ ಯೋಗ ಮೀಮಾಂಸೆಯ ಚರಿತ್ರೆ ಮತ್ತು ಯೋಗಾಚಾರ್ಯರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಾರೆ. ಮೂರನೇ ಅಧ್ಯಾಯ ಯೋಗ ಮತ್ತು ವ್ಯಕ್ತಿತ್ವಕ್ಕೆ ಸಂಬಂಧಪಟ್ಟುದು. ಮನೋವಿಜ್ಞಾನವನ್ನು ಇಟ್ಟುಕೊಂಡು ಯೋಗ ವ್ಯಕ್ತಿತ್ವದ ಮೇಲೆ ಬೀರುವ ಪರಿಣಾಮಗಳನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ. ನಾಲ್ಕನೇ ಅಧ್ಯಾಯದಲ್ಲಿ ಯೋಗದರ್ಶನ, ಯೋಗಾಂಗಗಳು ಮತ್ತು ಯೋಗ ಸಾಧಕರ ಕುರಿತಂತೆ ಲೇಖಕರು ಬರೆಯುತ್ತಾರೆ.ಯೋಗಾಭ್ಯಾಸವನ್ನು ನಡೆಸುವ ಬಗೆಯನ್ನೂ ಇಲ್ಲಿ ವಿವರಿಸುತ್ತಾರೆ. ಐದನೇ ಅಧ್ಯಾಯದಲ್ಲಿ ಯೋಗ-ಸಮಾಧಿಸ್ಥಿತಿ ಹಾಗೂ ಅಧಿಕಾರ ಲಕ್ಷಣಗಳ ಕುರಿತಂತೆ ಚರ್ಚಿಸುತ್ತಾರೆ. ಒಟ್ಟಿನಲ್ಲಿ ಯೋಗವನ್ನು ಲೇಖಕರು ಆಧ್ಯಾತ್ಮಿಕತೆಗೆ ತಳಕು ಹಾಕುವ ಮೂಲಕ ಅದನ್ನು ಲೌಕಿಕತೆಯಿಂದ ಅಲೌಕಿಕ ಕ್ರಿಯೆಯಾಗಿ ನೋಡುತ್ತಾರೆ. ಯೋಗದ ಕುರಿತಂತೆ ಗಂಭೀರವಾಗಿ ಚಿಂತಿಸುವ, ವೈದಿಕ ಹಿನ್ನೆಲೆಯಲ್ಲಿ ಯೋಗವನ್ನು ಅಧ್ಯಯನ ಮಾಡುವವರಿಗೆ ಈ ಕೃತಿ ಉಪಯುಕ್ತ.
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 73. ಮುಖಬೆಲೆ 70 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News