ನೀತಿ ಸಂಹಿತೆ ಜಾರಿಯಲ್ಲಿದ್ದರೂ ನೀರವ್ ಮೋದಿ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ವರ್ಗಾವಣೆ

Update: 2019-03-30 08:37 GMT

ಹೊಸದಿಲ್ಲಿ, ಮಾ.30: ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ, ವಂಚಕ ನೀರವ್ ಮೋದಿ ಪ್ರಕರಣದ ತನಿಖೆ ನಡೆಸುತ್ತಿದ್ದ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ಹಠಾತ್ತನೆ ವರ್ಗಾವಣೆ ಮಾಡಿ, ಕೆಲವೇ ಗಂಟೆಗಳಲ್ಲಿ ಮತ್ತೆ ವರ್ಗಾವಣೆ ಆದೇಶ ರದ್ದು ಮಾಡಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ನೀರವ್ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಕಾನೂನು ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಸತ್ಯವ್ರತ ಕುಮಾರ್ ಅವರನ್ನು ಮುಂಬೈ ವಿಶೇಷ ನಿರ್ದೇಶಕರು ಹಠಾತ್ತನೇ ವರ್ಗಾವಣೆ ಮಾಡಿದ್ದು ಹಲವರ ಹುಬ್ಬೇರಿಸಿತ್ತು. ಎರಡೂ ಆದೇಶಗಳು ಲಭ್ಯವಾಗಿವೆ ಎಂದು thewire.in ವರದಿ ಮಾಡಿದೆ.

ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಕಲ್ಲಿದ್ದಲು ಹಗರಣದ ಬಗ್ಗೆ ಕೂಡಾ ಕುಮಾರ್ ತನಿಖೆ ನಡೆಸುತ್ತಿದ್ದಾರೆ. ನೀರವ್ ಮೋದಿ ಪ್ರಕರಣದ ತನಿಖೆ ನಡೆಸುತ್ತಿರುವ ತಂಡದಲ್ಲಿ ತಾವು ಇರುವುದನ್ನು ಕುಮಾರ್ ಲಂಡನ್‍ನಿಂದ ಸ್ಪಷ್ಟಪಡಿಸಿದ್ದಾರೆ. ಆದರೆ ವರ್ಗಾವಣೆ ಆದೇಶ ಮತ್ತು ಅದನ್ನು ರದ್ದುಪಡಿಸಿ ಮರು ಆದೇಶ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಕುಮಾರ್ ಅವರ ವರ್ಗಾವಣೆ ಆದೇಶದ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಅರಿವಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಲಂಡನ್‍ ನಲ್ಲಿ ನೀರವ್ ಮೋದಿಯವರನ್ನು ಬಂಧಿಸಿದ ಬಳಿಕ ಮತ್ತು ಭಾರತಕ್ಕೆ ಗಡೀಪಾರು ಮಾಡದಂತೆ ಅವರು ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ, ತನಿಖಾಧಿಕಾರಿಯನ್ನು ವರ್ಗಾಯಿಸಿದ ಸರ್ಕಾರದ ಕ್ರಮ ಕುತೂಹಲಕ್ಕೆ ಕಾರಣವಾಗಿದೆ.

ಈ ಆದೇಶ ಹೊರಬಿದ್ದ ಬೆನ್ನಲ್ಲೇ ಇಡಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರು ವಿಶೇಷ ನಿರ್ದೇಶಕರು ನೀಡಿದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಹೊಸ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News