ಕಾಂಗ್ರೆಸ್ ಟಿಕೆಟ್ ಪಡೆದಿರುವ ಪುತ್ರನ ವಿರುದ್ಧ ಪ್ರಚಾರ ಮಾಡದಿರಲು ಬಿಜೆಪಿ ಸಚಿವ ಅನಿಲ್ ಶರ್ಮಾ ನಿರ್ಧಾರ

Update: 2019-03-30 10:00 GMT

ಶಿಮ್ಲಾ, ಮಾ.30: ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತನ್ನ ಪುತ್ರ ಆಶ್ರಯ್ ಶರ್ಮಾ ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದು ಹಿಮಾಚಲ ಪ್ರದೇಶದ ಬಿಜೆಪಿ ಸರಕಾರದ ಇಂಧನ ಸಚಿವ ಅನಿಲ್ ಶರ್ಮಾ ಘೋಷಿಸಿದ್ದಾರೆ.

ಮಂಡಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಆಶ್ರಯ್ ಶರ್ಮಾಗೆ ಟಿಕೆಟ್ ನೀಡಿದ ಮರುದಿನ ಪಿಟಿಐಗೆ ಅನಿಲ್ ಶರ್ಮಾ ಈ ವಿಚಾರ ತಿಳಿಸಿದ್ದಾರೆ.

ಸುಖ್ ರಾಮ್ ಪುತ್ರ ಅನಿಲ್ ಶರ್ಮಾ ಮಂಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡಿ ಸಂಸತ್ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ ರಾಮಸ್ವರೂಪ್ ಶರ್ಮಾ ಪರ ಪ್ರಚಾರ ಮಾಡುತ್ತಾರೆಂಬ ನಿರೀಕ್ಷೆಯಿತ್ತು.

‘‘ನನ್ನ ತಂದೆ ಸುಖ್‌ರಾಮ್ ಹಾಗೂ ಪುತ್ರ ಆಶ್ರಯ್ ಮಾ.25 ರಂದು ಕಾಂಗ್ರೆಸ್‌ಗೆ ಮರು ಸೇರ್ಪಡೆಯಾದ ತಕ್ಷಣ ಒಂದು ವೇಳೆ ನನ್ನ ಪುತ್ರ ಆಶ್ರಯ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಆತನ ವಿರುದ್ಧ ಪ್ರಚಾರ ಮಾಡಲಾರೆ. ಬಿಜೆಪಿಯ ಇತರ ನಾಯಕರ ಪರ ಪ್ರಚಾರ ಮಾಡುವೆನೆಂದು ಬಿಜೆಪಿ ನಾಯಕರಿಗೆ ಈ ವಿಚಾರವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ’’ ಎಂದು ಅನಿಲ್ ಹೇಳಿದ್ದಾರೆ.

ಹಿಮಾಚಲ ಪ್ರದೇಶ ಬಿಜೆಪಿ ಅಧ್ಯಕ್ಷ ಸತ್ಪಾಲ್ ಸಿಂಗ್ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸುತ್ತಾ, ''ಮಾಧ್ಯಮಗಳು ಇಂತಹ ವಿಷಯವನ್ನು ಏಕೆ ಹಿಂಬಾಲಿಸುತ್ತಿವೆ. ಇದು ಅನಿಲ್ ಶರ್ಮಾ ಕುಟುಂಬದ ವಿಚಾರವಾಗಿದೆ’’ಎಂದರು.

ಅನಿಲ್ ಶರ್ಮಾ 1993 ಹಾಗೂ 2012ರಲ್ಲಿ ವೀರಭದ್ರ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದರು. ಆದರೆ, ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ 2017ರ ಅಕ್ಟೋಬರ್‌ನಲ್ಲಿ ತನ್ನ ತಂದೆ ಜೊತೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಅನಿಲ್‌ರ ಪುತ್ರ ಆಶ್ರಯ್ ಮಂಡಿ ಟಿಕೆಟ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಹಾಲಿ ಸಂಸದ ರಾಮಸ್ವರೂಪ್ ಶರ್ಮಾಗೆ ಟಿಕೆಟ್ ನೀಡಿದೆ. ಹೀಗಾಗಿ ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದ ಆಶ್ರಯ್ ತನ್ನ ಅಜ್ಜನ ಜೊತೆ ಮಾ.25ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಶುಕ್ರವಾರ ಪ್ರಕಟಿಸಿದ ಅಭ್ಯರ್ಥಿ ಪಟ್ಟಿಯಲ್ಲಿ ಆಶ್ರಯ್‌ಗೆ ಟಿಕೆಟ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News