ಬಿಎಸ್ಪಿ ನಾಯಕಿ ಮಾಯಾವತಿ ಪ್ರಧಾನಿಯಾಗುವುದು ಖಚಿತ: ಶಾಸಕ ಎನ್.ಮಹೇಶ್

Update: 2019-03-30 11:55 GMT

ಮಡಿಕೇರಿ ಮಾ.30: ದೇಶದ ಇಂದಿನ ಅತಂತ್ರ ರಾಜಕೀಯ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶವೂ ಅತಂತ್ರವಾಗಲಿದ್ದು, ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಈ ಬಾರಿ ಪ್ರಧಾನಿ ಸ್ಥಾನ ಅಲಂಕರಿಸುವುದು ಖಚಿತವೆಂದು ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ನಡೆದ ಬಿಎಸ್‍ಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಗಂಡಾಂತರಕ್ಕೆ ಸಿಲುಕಿಕೊಂಡಿದೆ ಎಂದು ವಿಷಾದಿಸಿದರು. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಿ ಮತಗಳಿಸಿಕೊಳ್ಳುತ್ತಿವೆ. ದೇಶದ ಬಹುಜನ ಸಮಾಜಗಳು ಮಾತ್ರ ಇನ್ನೂ ಜಾಗೃತಗೊಂಡಿಲ್ಲ. ಮತದಾನ ಮಾಡುವ ಮೊದಲು ಮತಗಳ ಮೌಲ್ಯವನ್ನು ತಿಳಿದುಕೊಳ್ಳಬೇಕಾಗಿದೆ. ಬಿಜೆಪಿ ಪಕ್ಷ ಬಹುಮತ ಪಡೆದು ಐದು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದರೂ ಚುನಾವಣೆ ಪೂರ್ವ ನೀಡಿದ ಭರವಸೆಗಳು ಇನ್ನೂ ಈಡೇರಿಲ್ಲ. ಅಚ್ಛೆ ದಿನ್ ಆಯೇಗಾ ಎಂದು ಹೇಳಿದ್ದ ಮೋದಿ ದೇಶವನ್ನು ದಿವಾಳಿ ಮಾಡಿದ್ದಾರೆ. ಜನವಿರೋಧಿ ನೀತಿಗಳ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎನ್ನುವ ಘೋಷಣೆ ಕೇವಲ ಮಾತಿಗಷ್ಟೇ ಸೀಮಿತವಾಗಿದೆ ಎಂದು ಮಹೇಶ್ ಆರೋಪಿಸಿದರು.

ವಿದೇಶದಲ್ಲಿರುವ ಕಪ್ಪುಹಣವನ್ನು ಹೊರ ತಂದು ದೇಶದ ಜನರ ಖಾತೆಗೆ 15 ಲಕ್ಷ ರೂ. ಹಣ ಹಾಕುತ್ತೇನೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದುವರೆಗೂ ಕಪ್ಪುಹಣವನ್ನು ಹೊರ ತಂದಿಲ್ಲ. 2 ಕೋಟಿ ವಾರ್ಷಿಕವಾಗಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿ 5 ವರ್ಷ ಕಳೆದಿದೆ. ಆದರೆ ಈವರೆಗೆ ಕೇವಲ 27 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ನೋಟ್ ಅಮಾನ್ಯೀಕರಣದಿಂದ ರಾಷ್ಟ್ರದ 2 ಕೋಟಿ ಉದ್ಯೋಗಗಳು ನಾಶವಾಗಿದೆ. ಚುನಾವಣೆ ವೇಳೆಯಲ್ಲಿ ರಾಮಮಂದಿರದ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷ ಇದುವರೆಗೂ ಯಾಕೆ ಮಂದಿರ ನಿರ್ಮಾಣ ಮಾಡಿಲ್ಲ ಎಂದು ಮಹೇಶ್ ಪ್ರಶ್ನಿಸಿದರು. ಬಾಂಬ್ ಹೊತ್ತು ದೇಶದ ಗಡಿಯನ್ನು ಉಗ್ರಗಾಮಿಗಳು ದಾಟಿ ಸೈನಿಕರನ್ನು ಹತ್ಯೆಗೈದಿರುವುದು ಕೇಂದ್ರದ ವೈಫಲ್ಯತೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಕೂಡ ಜನರ ನೋವಿಗೆ ಸ್ಪಂದಿಸಿಲ್ಲ. 2ಜಿ, 3ಜಿ ಸೆಕ್ಟ್ರಮ್ ಹಗರಣ ಮಾಡಿದ್ದೇ ಹೊರೆತು ಅಭಿವೃದ್ದಿ ಮಾಡಿಲ್ಲ. ಮಾತಿನಲ್ಲಿ ಮಾತ್ರ ಬಡವರ ಪರ ಎಂದು ಹೇಳುವ ಕಾಂಗ್ರೆಸಿಗರು ಮತ ಪಡೆದ ನಂತರ ಮರೆತು ಬಿಡುತ್ತಾರೆ. ಇಂದಿರಾಗಾಂಧಿ ಕಾಲದಿಂದಲೂ ಗರೀಬಿ ಹಠವೋ, ದೇಶ್ ಬಚಾವೋ ಎಂದು ಹೇಳುತ್ತಿರುವ ಕಾಂಗ್ರೆಸ್ ಈವರೆಗೂ ಬಡತನ ನಿರ್ಮೂಲನೆ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಹೆಸರು ಹೇಳಿ ಮತ ಸೆಳೆದುಕೊಳ್ಳುತ್ತಿದೆ. ಆದರೆ ಈ ಪಕ್ಷದಿಂದ ಯಾವುದೇ ಲಾಭವಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಇವೆರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು. 

ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ 60ಕ್ಕೂ ಹೆಚ್ಚು ಸ್ಥಾನಗಳನ್ನು ಬಿಎಸ್‍ಪಿ ಪಕ್ಷ ತನ್ನದಾಗಿಸಿಕೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಆಡಳಿತಾವಧಿಯಲ್ಲಿ ಬಡವರಿಗೆ ತಲಾ 3 ಎಕರೆ ಭೂಮಿಯನ್ನು ನೀಡುವ ಮೂಲಕ ದುರ್ಬಲರ ಬಲವರ್ಧನೆಗೆ ಸಹಕರಿಸಲಾಗಿತ್ತು. ದೇಶದ ಪ್ರಧಾನಿಯಾದರೆ ಮಾಯಾವತಿ ಅವರು ಈ ರೀತಿಯ ಜನಪರ ಕಾರ್ಯಗಳನ್ನು ಮಾಡಲಿದ್ದಾರೆ ಎಂದು ಮಹೇಶ್ ಹೇಳಿದರು.

ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಂದ್ರೇಗೌಡ ಮಾತನಾಡಿ, ಬಿಎಸ್‍ಪಿ ಪಕ್ಷ ಬಡವರ ಪಕ್ಷ, ಕೊಡಗು ಜಿಲ್ಲೆಯಲ್ಲಿ ಮೊದಲ ಪ್ರಚಾರ ಪ್ರಾರಂಭಿಸಿದ್ದೇನೆ. ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಶಕ್ತಿ ಮತದಾರರಿಗಿದೆ. ಎಚ್ಚೆತ್ತು ಮೌಲ್ಯ ಮತಗಳನ್ನು ಚಲಾವಣೆ ಮಾಡಿ ಎಂದರು. 

ಬಿಎಸ್‍ಪಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಮಾದೇಶ್ ಉಪ್ಪಾರ್, ವಲಯ ಉಸ್ತುವಾರಿ ಕರಾಟೆ ಸಿದ್ದರಾಜು, ವಿಭಾಗೀಯ ಉಸ್ತುವಾರಿ ಅಮೃತ ಅತ್ರಾಡಿ, ರಾಹುಲ್, ಸೋಮೇಶ್, ಮಡಿಕೇರಿ ಕ್ಷೇತ್ರ ಉಸ್ತುವಾರಿ ರಫೀಕ್ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News