ಮತದಾನದಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೇರಿಸಬೇಕು: ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ್

Update: 2019-03-30 12:16 GMT

ಶಿವಮೊಗ್ಗ, ಮಾ. 30: ಇಂದಿನ ದಿನದಲ್ಲಿ ಯುವಜನರಲ್ಲಿ ಮತದಾನದ ಕುರಿತು ಆಸಕ್ತಿ ಕ್ಷೀಣಿಸಿದೆ. ಅದು ಬದಲಾಗಬೇಕು ಯುವಜನರು ಮತದಾನದಲ್ಲಿ ಪಾಲ್ಗೊಂಡು ಜಿಲ್ಲೆಯನ್ನು ಮೊದಲ ಸ್ಥಾನಕ್ಕೇರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಎ ದಯಾನಂದ್ ಹೇಳಿದರು.

ನಗರದ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮತದಾನ ಜಾಗೃತಿ, ಇವಿಎಂ, ವಿವಿ ಪ್ಯಾಟ್ ಹಾಗೂ ವಿಶೇಷ ಪ್ರತಿಜ್ಞಾ ವಿಧಿ ಸ್ವಿಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವನ್ನು ದೇವರು ಎಂದು ಪರಿಗಣಿಸಲಾಗಿದೆ. ಅಂತಹ ದೇವರನ್ನು ನಾವು ಗೌರವಿಸಿ ಪೂಜಿಸುವ ಕಾರ್ಯಮಾಡಬೇಕು ಎಂದರೆ ಮಾತದಾನವೊಂದೇ ದಾರಿ. ಮತದಾನ ಮಾಡದೆ ಇದ್ದರೆ ನಾವು ಸಂವಿಧಾನಕ್ಕೆ ಅಗೌರವ ಸೂಚಿಸಿದಂತೆ ಎಂದು ಅವರು ಅಭಿಪ್ರಾಯಪಟ್ಟರು.

ಸಂವಿಧಾನಕ್ಕೆ ನಾವು ಸಲ್ಲಿಸುವ ಗೌರವ ಪ್ರಾಮಾಣಿಕವಾಗಿದ್ದರೆ ಮಾತ್ರ ದೇಶದ ಆಡಳಿತ ವ್ಯವಸ್ಥೆ ಸರಿಯಾದ ಮಾರ್ಗದಲ್ಲಿ ಸಾಗಲು ಸಾಧ್ಯವಿದೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಶೇ.15ರಿಂದ 20ರಷ್ಟು ಸಾಕ್ಷರತೆ ಪ್ರಮಾಣವಿತ್ತು ಆಗ 75% ಮತದಾನ ನಡೆದಿತ್ತು. ಇಂದು 86%ದಷ್ಟು ಸಾಕ್ಷರರಿದ್ದಾರೆ. ಆದರೆ ಮತದಾನದ ಪ್ರಮಾಣ 65%ಗೆ ಕುಸಿದಿದೆ. ಇದು ಬದಲಾಗಿ ನೂರಕ್ಕೆ ನೂರರಷ್ಟು ಮತದಾನ ನಡೆಯುವಂತೆ ಜಿಲ್ಲೆಯನ್ನು ಮನ್ನಡೆಸಬೇಕಿದೆ ಎಂದು ಅವರು ಹೇಳಿದರು.

ಮತದಾನ ಒಂದು ಹಕ್ಕು ಮತ್ತು ನೋಟಾ ಯಾವ ಅಭ್ಯರ್ಥಿಯು ಅರ್ಹನಲ್ಲ ಎಂಬ ನಿಮ್ಮ ಪ್ರತಿಭಟನೆಯಾಗಿದೆ. ಮತದಾನದಿಂದ ಹಿಂದೆ ಸರಿಯುವವರ ನಿರ್ಧಾರವೇನೆಂದು ಸ್ಪಷ್ಟತೆ ಇಲ್ಲ. ಹಾಗಾಗಿ ಕಡ್ಡಾಯವಾಗಿ ಪ್ರತಿಯೊಬ್ಬರು ಸಹ ಮತದಾನ ಮಾಡಬೇಕು. ಅದು ನೋಟಾ ಆದರು ಸರಿ, ಮತದಾನದಿಂದ ದೂರ ಉಳಿಯಬಾರದು ಎಂದರು.

ಮತದಾನದಲ್ಲಿ ನಾವು ಚಲಾಯಿಸುವ ಹಕ್ಕು ದೇಶದ ಭವಿಷ್ಯವಾಗಿದೆ. ನೋಟಾ ಸಹ ವಿಶೇಷವಾದ ಸ್ಥಾನ ಹೊಂದಿದೆ. ಬಹುಪಾಲು ನೋಟಾ ಹೊಂದಿದ್ದರೆ ಆಗ ಚುನಾವಣಾ ಆಯೋಗ ಮುಂದಿನದ್ದನ್ನು ನಿರ್ಧರಿಸಲಿದೆ ಎಂದರು. ಯುವಜನರು ಊರಿನ ಮತದಾರರನ್ನ ಮತದಾನಕ್ಕೆ ಪ್ರೇರೇಪಿಸುವುದರ ಮೂಲಕ ಜನರಲ್ಲಿ ಜಾಗೃತೆ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮ, ನೋಡಲ್ ಅಧಿಕಾರಿ ಟಿ.ಆರ್ ಗೋಪಾಲ್ ಹಾಗೂ ಕಾಲೇಜಿನ ಪ್ರಾಂಶುಪಾಲ ಹೆಚ್. ಚಂದ್ರಶೇಖರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News