ದೇವೇಗೌಡರ ಗೆಲುವಿಗೆ ಗೊಲ್ಲ ಸಮುದಾಯದ ಬೆಂಬಲ ಅಗತ್ಯ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-03-30 12:39 GMT

ತುಮಕೂರು,ಮಾ.30: ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಗೊಲ್ಲ ಸಮುದಾಯದ ಮುಖಂಡರು ಒಟ್ಟಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.

ನಗರದ ಶಿರಾಗೇಟ್‍ನಲ್ಲಿ ನಡೆದ ಗೊಲ್ಲ ಸಮುದಾಯದ ಮುಖಂಡರುಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರು ಮತ್ತು ಬಡವರ ಬಗ್ಗೆ ಚಿಂತಿಸದ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳಿಕೊಂಡೇ ಅಧಿಕಾರ ಮಾಡಿದ್ದಾರೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರೈತರಿಗಾಗಿ ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಗಳು ಘೋಷಣೆಯಾದ ಬಳಿಕ ನಡೆದ ಸೀಟು ಹಂಚಿಕೆಯಲ್ಲಿ ತುಮಕೂರಿನಲ್ಲಿ ಹಾಲಿ ನಮ್ಮ ಪಕ್ಷದ ಸಂಸದರೇ ಇದ್ದರು. ಆದರೆ ಸೀಟು ಹಂಚಿಕೆಯಾದಾಗ ಜೆಡಿಎಸ್‍ಗೆ ಈ ಕ್ಷೇತ್ರ ಬಿಟ್ಟುಕೊಟ್ಟ ಸಂದರ್ಭದಲ್ಲಿ ನಮಗೆ ತುಂಬಾ ಆತಂಕವಾಯಿತು. ಖುದ್ದು ದೇವೇಗೌಡರನ್ನೇ ಭೇಟಿ ಮಾಡಿ ಬರುವುದಾದರೆ ನೀವೇ ಬನ್ನಿ, ನಿಮ್ಮ ಬದಲಿಗೆ ಬೇರೆ ಯಾರಾದರೂ ಬರುವವರಿದ್ದರೆ ಕ್ಷೇತ್ರವನ್ನು ನಮಗೇ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದೆವು. 
ಆನಂತರ ರಾಹುಲ್ ಗಾಂಧಿಯವರೇ ಕರೆ ಮಾಡಿ ದೇವೇಗೌಡರು ಯಾವ ಕ್ಷೇತ್ರ ಕೇಳುತ್ತಾರೋ ಆ ಕ್ಷೇತ್ರವನ್ನು ಬಿಟ್ಟುಕೊಡಿ ಎಂದರು. ಅದರಂತೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಮೈತ್ರಿ ಪಕ್ಷಗಳೆರಡೂ ಸೇರಿ ಈಗ ಪ್ರಚಾರಕ್ಕೆ ಬಂದಿದ್ದೇವೆ. ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಮೈತ್ರಿ ಪಕ್ಷದ ಅಭ್ಯರ್ಥಿಗೆ ನೀಡಿ ಗೆಲುವು ಸಾಧಿಸಲು ಅವಕಾಶ ಮಾಡಿಕೊಡಿ ಎಂದರು.

ನಮ್ಮ ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯವೆಂದರೆ ಗೊಲ್ಲ ಸಮುದಾಯ. ನಾಗರಿಕತೆಯಿಂದ ಇನ್ನೂ ದೂರವೇ ಉಳಿದಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಹೋಗುವ ವಾತಾವರಣ ನಿರ್ಮಾಣವಾಗಬೇಕು. ಈ ಸಮುದಾಯದಿಂದ ನಾನು ಮಧುಗಿರಿಯಲ್ಲಿ ಶಾಸಕನಾಗಲು ಸಾಧ್ಯವಾಯಿತು. ಋಣ ತೀರಿಸುವ ಜವಾಬ್ದಾರಿ ನನ್ನದಿದೆ ಎಂದರು.

ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದೇವೇಗೌಡರಿಂದ ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಸಮುದಾಯಗಳು ಮನಸ್ಸು ಮಾಡಿ ಗೌಡರ ಗೆಲುವಿಗೆ ಸಹಕರಿಸಬೇಕು. ಆ ಮೂಲಕ ಹೊಸದೊಂದು ಬದಲಾವಣೆಗೆ ಎಲ್ಲರೂ ಕಾರಣರಾಗಬೇಕು ಎಂದರು.

ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕ ತಿಪ್ಪೇಸ್ವಾಮಿ, ವೀರಭದ್ರಯ್ಯ, ಮಾಜಿ ಶಾಸಕ ರುಗಳಾದ ಡಾ.ಎಸ್.ರಫೀಕ್ ಅಹಮದ್, ಕೆ.ಷಡಕ್ಷರಿ, ಹೆಚ್.ನಿಂಗಪ್ಪ, ಸುಧಾಕರಲಾಲ್, ಜೆಡಿಎಸ್ ವಕ್ತಾರ ರಮೇಶ್ ಬಾಬು, ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಕೊಂಡವಾಡಿ ಚಂದ್ರ ಶೇಖರ್, ಜೆಡಿಎಸ್ ಕಾರ್ಯದರ್ಶಿ ಮಹಾಲಿಂಗಪ್ಪ, ವೀರಣ್ಣಗೌಡ, ಕಾಂಗ್ರೆಸ್ ಮುಖಂಡರುಗಳಾದ ಜಿ.ಚಂ ದ್ರಶೇಖರ ಗೌಡ, ಪುಟ್ಟರಾಜು, ಹೊನ್ನಗಿರಿಗೌಡ, ದೀಪು ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News