ಹನೂರು: ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರದಾಟ; ದುರಸ್ಥಿಗೆ ಗ್ರಾಮಸ್ಥರ ಆಗ್ರಹ

Update: 2019-03-30 13:11 GMT

ಹನೂರು,ಮಾ.30: ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ರಸ್ತೆಯು ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕೊಳ್ಳೇಗಾಲ- ಮಲೈಮಹದೇಶ್ವರಬೆಟ್ಟ ಸಾಗುವ ಹನೂರು ಖಾಸಗಿ ಬಸ್ ನಿಲ್ದಾಣದ ಕೇಂದ್ರ ಭಾಗದಲ್ಲಿನ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಈ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಇಲ್ಲಿನ ಹೃದಯ ಭಾಗದ ರಸ್ತೆಯಂತೂ ಗುಂಡಿಗಳು ಬಿದ್ದು ಸಂಚಾರಕ್ಕೆ ತುಂಬಾ ಅಡಚಣೆ ಉಂಡು ಮಾಡುತ್ತದೆ. ವಾಹನಗಳ ವಿಪರೀತ ಓಡಾಟದಿಂದ ರಸ್ತೆಯ ಅಕ್ಕಪಕ್ಕ ಧೂಳು ಮಿಶ್ರಿತ ವಾತಾವರಣ ನಿರ್ಮಾಣವಾಗಿ ರಸ್ತೆಯ ಇಕ್ಕೆಲಗಳಲ್ಲಿನ ವ್ಯಾಪಾರಸ್ಥರು, ಪಾದಚಾರಿಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಲ್ಲದೆ ಬಸ್‍ಗಳು ಖಾಸಗಿ ಬಸ್ ನಿಲ್ದಾಣಕ್ಕೆ ತಿರುಗಿ ಒಳ ಪ್ರವೇಶಿಸುವ ಈ ಗುಂಡಿ ಬಿದ್ದು ಹಾಳಾದ ರಸ್ತೆಯಿಂದ ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದ್ದು, ಕೆಲ ದಿನಗಳ ಹಿಂದೆಷ್ಟೇ ಶಾಲಾ ಶಿಕ್ಷಕರೊಬ್ಬರ ಬೈಕ್ ಅಪಘಾತಕ್ಕೀಡಾಗಿತ್ತು. ಹೀಗಾಗಿ ವಾಹನ ಸವಾರರು ಪಾದಚಾರಿಗಳ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳ ಇತ್ತ ಗಮನ ಹರಿಸಿ ರಸ್ತೆ ದುರಸ್ಥಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ಮುಖ್ಯ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಇರುವುದರಿಂದ ವಾಹನಗಳಲ್ಲಿ ಓಡಾಡುವುದು ಕಷ್ಟ. ಅದರಲ್ಲೂ ರಾತ್ರಿ ವೇಳೆ ಓಡಾಡುವುದು ತುಂಬಾ ಕಷ್ಟಕರವಾಗಿದೆ.

-ಶಂಕರ್, ಹೂವಿನ ವ್ಯಾಪಾರಿ, ಹನೂರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News