ನೋಟು ನಿಷೇಧದ ಬಳಿಕ ಶಂಕಾಸ್ಪದ ಹಣಕಾಸು ವರ್ಗಾವಣೆಗಳಲ್ಲಿ 14 ಪಟ್ಟು ಹೆಚ್ಚಳ

Update: 2019-03-31 17:41 GMT

ಹೊಸದಿಲ್ಲಿ,ಮಾ.31:2016ರಲ್ಲಿ ಮೋದಿ ಸರಕಾರ 500 ರೂ. ಹಾಗೂ 1 ಸಾವಿರ ರೂ. ಮೌಲ್ಯದ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ದೇಶ ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ 14 ಲಕ್ಷಕ್ಕೂ ಅಧಿಕ ಶಂಕಾಸ್ಪದ ಹಣವರ್ಗಾವಣೆಗಳು (ಎಸ್‌ಟಿಆರ್) ವರದಿಯಾಗಿದ್ದು, ಇದು ಹಿಂದಿಗಿಂತ ಶೇ. 1400 ರಷ್ಟು ಅಧಿಕವೆಂದು ಅರ್ಥಿಕ ಗುಪ್ತಚರ ಘಟಕ (ಎಫ್‌ಐಯು) ಪತ್ತೆಹಚ್ಚಿದೆ.

2017-18ರ ಸಾಲಿನಲ್ಲಿ ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ 14 ಲಕ್ಷಕ್ಕೂ ಅಧಿಕ ಶಂಕಾಸ್ಪದ ಹಣಕಾಸು ವರ್ಗಾವಣೆಯ ವರದಿಗಳು ಎಫ್‌ಐಯುಗೆ ಲಭಿಸಿರುವುದಾಗಿ ಇಲಾಖೆಯ ನಿರ್ದೇಶಕ ಪಂಕಜ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಇದು ಅದರ ಹಿಂದಿನ ವರ್ಷಕ್ಕಿಂತ (2016-17) ಪಡೆಯಲಾದ ಎಸ್‌ಟಿಆರ್‌ಗಳ ಸಂಖ್ಯೆಗಿಂತ ಮೂರು ಪಟ್ಟು ಅಧಿಕ ಹಾಗೂ ನಗದು ಅಮಾನ್ಯತೆಗೆ ಮುನ್ನ ಸ್ವೀಕರಿಸಲಾದ ಎಸ್‌ಟಿಆರ್‌ಗಳಿಗಿಂತ 14 ಪಟ್ಟು ಹೆಚ್ಚೆಂದು ಪಂಕಜ್ ಕುಮಾರ್ ತಿಳಿಸಿದ್ದಾರೆ.

2016-17ರ ಸಾಲಿನಲ್ಲಿ 4,73,006 ಎಸ್‌ಟಿಆರ್ ಪ್ರಕರಣಗಳನ್ನು ಸ್ವೀಕರಿಸ ಲಾಗಿದ್ದರೆ, 2017-18ರಲ್ಲಿ ಸ್ವೀಕರಿಸಲಾದ ಎಸ್‌ಟಿಆರ್‌ಗಳ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆಯೆಂದು ಎಫ್‌ಐಯು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

2016ರ ನವೆಂಬರ್8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು 1 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ನೋಟು ನಿಷೇಧದ ಘೋಷಣೆಯ ಬೆನ್ನಲ್ಲೇ, ಅಗಾಧ ಪ್ರಮಾಣದಲ್ಲಿ ನಗದು ಹಣ ಬ್ಯಾಂಕ್‌ನಲ್ಲಿ ಜಮಾವಣೆಯಾಗಿದ್ದವು ಹಾಗೂ ಭಾರೀ ಸಂಖ್ಯೆಯಲ್ಲಿ ಅಂತರ್ ಬ್ಯಾಂಕ್ ವಹಿವಾಟುಗಳು ವರದಿಯಾಗಿವೆ.

ಅರ್ಥಿಕ ಬೇಹುಗಾರಿಕಾ ಘಟಕವು (ಎಫ್‌ಐಯು)ವು, ಕಪ್ಪುಹಣ ಬಿಳುಪು ಕಾಯ್ದೆ ತಡೆ (ಪಿಎಂಎಲ್‌ಎ)ಯಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಉನ್ನತ ವೌಲ್ಯದ ನಗದು ವರ್ಗಾವಣೆಗಳ ಬಗ್ಗೆ ಹಾಗೂ ನಕಲಿ ನೋಟುಗಳ ಬಗ್ಗೆ ವರದಿಯನ್ನು ಕೇಳುವ ಅಧಿಕಾರವನ್ನು ಹೊಂದಿದೆ.

 ನೋಟು ನಿಷೇಧಕ್ಕೆ ಮುನ್ನ ಅಂದರೆ 2013-14ರಲ್ಲಿ 61,953 , 2014-15ರಲ್ಲಿ 58,646 ಹಾಗೂ 2015-16ರಲ್ಲಿ 1,05,973 ಶಂಕಾಸ್ಪದ ಹಣಕಾಸು ವರ್ಗಾವಣೆಯ ಪ್ರಕರಣಗಳು ವರದಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News