ದ್ರೌಪದಿ ಪಾತ್ರ ಪರಿಚಯ

Update: 2019-03-31 18:31 GMT

ಹಾಭಾರತದ ಕೇಂದ್ರ ಪಾತ್ರ ‘ದ್ರೌಪದಿ’. ಮಹಾಭಾರತ ಯುದ್ಧ ನಡೆಯುವುದು ಭೂಮಿಗಾಗಿ ಎಷ್ಟು ನಿಜವೋ ದ್ರೌಪದಿಗಾಗಿಯೂ ಅಷ್ಟೇ ನಿಜ. ದ್ರೌಪದಿಯನ್ನು ವರಿಸಲು ವಿಫಲನಾದ ದುರ್ಯೋಧನ, ಕರ್ಣರಿಂದ ತೆರೆದುಕೊಳ್ಳುವ ಮಹಾಭಾರತ, ಬಳಿಕ ಇಂದ್ರಪ್ರಸ್ಥದಲ್ಲಿ ದುರ್ಯೋಧನನಿಗಾದ ಅವಮಾನದೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಐದು ಗ್ರಾಮಗಳನ್ನು ಕೊಟ್ಟರೆ ಸಾಕು, ಯುದ್ಧ ಬೇಡ ಎನ್ನುವ ಪಾಂಡವರನ್ನು ಯುದ್ಧ ಮಾಡಲೇಬೇಕು ಎಂದು ಒತ್ತಾಯಿಸುವುದು ದ್ರೌಪದಿಯ ಅಪಮಾನ, ನೋವು, ಸಂಕಟ, ಆಕ್ರೋಶ ಮತ್ತು ಸೇಡು. ಪುರಾಣದ ಈ ಗಟ್ಟಿ ಪಾತ್ರದ ಆಳದಲ್ಲಿ ಸ್ತ್ರೀಸಂವೇದನೆಯ ತೊರೆಯಿದೆ. ವ್ಯಾಸ ಈ ಪಾತ್ರವನ್ನು ಅತ್ಯಂತ ಆಧುನಿಕವಾಗಿ ಕಂಡಿದ್ದಾನೆ. ದ್ರೌಪದಿಯ ಪಾತ್ರ ಬಳಿಕವೂ ಹಲವು ಕವಿಗಳಿಂದ ಬೆಳೆಯುತ್ತಾ ಬಂದಿದೆ. ಆಧುನಿಕ ಸಾಹಿತ್ಯದಲ್ಲೂ ದ್ರೌಪದಿಯ ಕುರಿತಂತೆ ಕಾದಂಬರಿ, ವಿಶ್ಲೇಷಣೆಗಳು ಸಾಕಷ್ಟಿವೆ. ದ್ರೌಪದಿ ಬರೆದಷ್ಟೂ ಮುಗಿಯದ ಹೆಣ್ಣಿನ ತಳಮಳ.

 ‘ಮಾನನೀಯೆ ದ್ರೌಪದಿ’ ಕೃತಿಯಲ್ಲಿ ಸತ್ಯವತಿ ರಾಮನಾಥ ಅವರು ಕುಮಾರ ವ್ಯಾಸ ಭಾರತ ಹಾಗೂ ಪುರಾಣಗಳನ್ನು ಆಧರಿಸಿ ಆಕೆಯ ಪಾತ್ರವನ್ನು ಮರುಕಟ್ಟುವ ಪ್ರಯತ್ನವನ್ನು ಮಾಡಿದ್ದಾರೆ. ಮೂಲ ಮಹಾಭಾರತ, ಕೌಲಗಿ ಶೇಷಾಚಾರ್ ಅವರ ಚಕ್ರತೀರ್ಥ, ಆ. ರಾ. ಸೇತುರಾಮ್‌ರ ಕುಮಾರವ್ಯಾಸ ಭಾರತ ಹಾಗೂ ಹಲವು ಉಪಕತೆಗಳನ್ನು ಆಧರಿಸಿ ಲೇಖನಗಳನ್ನು ಬರೆದಿದ್ದಾರೆ. ದ್ರೌಪದಿಯ ಜನ್ಮ, ದ್ರೌಪದಿಯ ಸ್ವಯಂವರ, ರಾಣಿಯಾಗಿ ದ್ರೌಪದಿ, ಪತಿವ್ರತೆ ದ್ರೌಪದಿ, ವೀರವನಿತೆಯಾಗಿ ದ್ರೌಪದಿ, ಶ್ರೀಕೃಷ್ಣನ ಸಖಿಯಾಗಿ, ಗೃಹಣಿಯಾಗಿ ಹೀಗೆ ಬೇರೆ ಬೇರೆ ಮಗ್ಗುಲಲ್ಲಿ ದ್ರೌಪದಿಯನ್ನು ನೋಡಲಾಗಿದೆ. ದ್ರೌಪದಿಯ ಕುರಿತಂತೆ ಇರುವ ಬೇರೆ ಬೇರೆ ಉಪಕತೆಗಳು, ದ್ರೌಪದಿ ವಸ್ತ್ರಾಪಹರಣ, ಸೈಂಧವನಿಂದ ಅಪಹರಣ ಇವುಗಳನ್ನೂ ಸಂಗ್ರಹಿಸಲಾಗಿದೆ.

 ಇದು ಯಾವುದೇ ವಿಮರ್ಶಾತ್ಮಕ, ಸಂಶೋಧನಾತ್ಮಕ ಲೇಖನಗಳ ಸಂಗ್ರಹಗಳಲ್ಲ ಎನ್ನುವುದನ್ನು ಗಮನಿಸಬೇಕು. ಉದಾಹರಣೆಗೆ, ಯುಗಾಂತ ಕೃತಿಯಲ್ಲಿ ಇರಾವತಿ ಕರ್ವೆಯಂತಹ ವಿದ್ವಾಂಸರು ಬೇರೆ ಬೇರೆ ಪಾತ್ರಗಳನ್ನು ವಿಶ್ಲೇಷಣಾತ್ಮಕವಾಗಿ ವಿವರಿಸುತ್ತಾರೆ. ಹೊಸ ಹೊಳಹುಗಳನ್ನು ನೀಡುತ್ತಾರೆ. ಆದರೆ ಈ ಕೃತಿಯಲ್ಲಿ ದ್ರೌಪದಿಯ ಕುರಿತಂತೆ ಇರುವ ಸಿದ್ಧ ಕತೆಗಳನ್ನೇ ಮರು ನಿರೂಪಿಸಲಾಗಿದೆ. ಲೇಖಕಿ ದ್ರೌಪದಿಯ ಕುರಿತಂತೆ ಹೊಸ ಹೊಳಹುಗಳನ್ನು ನೀಡುವುದಿಲ್ಲ.198 ಪುಟಗಳ ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಹೊರ ತಂದಿದೆ. ಮುಖಬೆಲೆ 150 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News