ಉತ್ತರಪ್ರದೇಶ: ಸುಲ್ತಾನ್‌ಪುರದ ಹೆಸರನ್ನು ಬದಲಿಸುವಂತೆ ರಾಜ್ಯಪಾಲರ ಪತ್ರ

Update: 2019-03-31 18:35 GMT

ಲಕ್ನೊ, ಮಾ.31: ಉತ್ತರಪ್ರದೇಶದ ಸುಲ್ತಾನ್‌ಪುರ ನಗರದ ಹೆಸರನ್ನು ಖುಷ್ ಭಾವನಪುರ ಎಂದು ಬದಲಿಸುವಂತೆ ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಕ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

 ಮಾರ್ಚ್ 25ರಂದು ರಜಪುತಾನ ಸೌರ್ಯ ಪ್ರತಿಷ್ಠಾನ ಎಂಬ ಸಂಸ್ಥೆಯ ನಿಯೋಗವೊಂದು ತನ್ನನ್ನು ಭೇಟಿ ಮಾಡಿ ಸುಲ್ತಾನ್‌ಪುರ ಇತಿಹಾಸದ ಕುರಿತ ಪುಸ್ತಕವೊಂದನ್ನು ನೀಡಿದೆ. ಅಲ್ಲದೆ ನಗರದ ಭವ್ಯ ಇತಿಹಾಸದ ಬಗ್ಗೆ ತನ್ನೊಂದಿಗೆ ಚರ್ಚಿಸಿದ್ದು ನಗರವನ್ನು ಪಾರಂಪರಿಕ ನಗರಗಳ ವಿಭಾಗದಡಿ ಸೇರಿಸುವಂತೆ ಹಾಗೂ ಹೆಸರನ್ನು ಖುಷ್ ಭಾವನ್‌ಪುರ ಎಂದು ಬದಲಿಸುವಂತೆ ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪುಸ್ತಕ ಹಾಗೂ ಅವರು ನೀಡಿದ್ದ ಮನವಿ ಪತ್ರವನ್ನು ನಿಮಗೆ ಕಳುಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮಾರ್ಚ್ 28ರಂದು ಬರೆದ ಪತ್ರದಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ.

ಸುಲ್ತಾನ್‌ಪುರ ನಗರವು ರಾಜ್ಯದ ಅಯೋಧ್ಯ ವಿಭಾಗದಡಿ ಬರುತ್ತದೆ. ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಆದಿತ್ಯನಾಥ್ ಅಲಹಾಬಾದ್ ನಗರದ ಹೆಸರನ್ನು ಪ್ರಯಾಗ್‌ರಾಜ್ ಹಾಗೂ ಫೈಝಾಬಾದ್ ನಗರದ ಹೆಸರನ್ನು ಅಯೋಧ್ಯ ಎಂದು ಬದಲಿಸುವ ಕೋರಿಕೆಗೆ ಸ್ಪಂದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News