ಕನ್ನಡಿಯೊಳಗೆ ಹಿಡಿದಿಟ್ಟ ಕಾವ್ಯಾನಂದ

Update: 2019-04-01 18:42 GMT

ಕನ್ನಡದ ಹೊಸ ತಲೆಮಾರಿಗೆ ಹಿರಿಯ ಕವಿಗಳನ್ನು ಪರಿಚಯಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಸಾಧಾರಣವಾಗಿ ಕುವೆಂಪು, ಮಾಸ್ತಿ, ಬೇಂದ್ರೆಯಂತಹ ಕವಿಗಳ ಕುರಿತಂತೆ ಯುವ ಸಾಹಿತ್ಯಾಭಿಮಾನಿಗಳು ಸಾಮಾನ್ಯ ಜ್ಞಾನವನ್ನು ಹೊಂದಿರುತ್ತಾರೆ. ಆದರೆ ಅವರಿಗಿಂತ ಎರಡನೆಯ ಹಂತದಲ್ಲಿರುವ ಹಿರಿಯ ಕವಿಗಳನ್ನು ಬಹುತೇಕ ಮರೆತೇ ಬಿಟ್ಟಿದ್ದಾರೆ. ಅಂತಹ ಕವಿಗಳಲ್ಲಿ ಕಾವ್ಯಾನಂದ ಕೂಡ ಒಬ್ಬರು. ಕಾವ್ಯನಂದ ಎನ್ನುವುದು ಸಿದ್ದಯ್ಯ ಪುರಾಣಿಕರ ಕಾವ್ಯನಾಮ. ಇವರ ವಿಶೇಷತೆಯೆಂದರೆ ವೃತ್ತಿಯಲ್ಲಿ ಇವರು ಐಎಎಸ್ ಅಧಿಕಾರಿ.ರಾಜ್ಯ ಸರಕಾರದ ವಿವಿಧ ಹುದ್ದೆಗಳಲ್ಲಿ ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಿದ ಡಾ. ಪುರಾಣಿಕರು ಅದ ಜೊತೆ ಜೊತೆಗೇ ಸಾಹಿತ್ಯ ಕೃಷಿಯನ್ನು ಕೂಡ ನಿರಂತರವಾಗಿ ಮಾಡಿಕೊಂಡು ಬಂದರು. ಅವರ ಬದುಕು ಮತ್ತು ಬರಹಗಳ ಮೇಲೆ ಬೆಳಕು ಚೆಲ್ಲುವ ಕೃತಿ ಪ್ರಕಾಶ ಗಿರಿಮಲ್ಲನವರ ‘‘ಕಾವ್ಯಾನಂದರ ಬದುಕು ಮತ್ತು ಕಾವ್ಯ’’. ಕೃತಿಯನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ ಅವರ ಬದುಕಿಗೆ ಆದ್ಯತೆಯನ್ನು ನೀಡಿದ್ದಾರೆ. ಜನನ, ಬಾಲ್ಯ, ವಿದ್ಯಾಭ್ಯಾಸ, ಸೇವಾಜೀವನ, ಕನ್ನಡ ಕಟ್ಟುವ ಕೆಲಸ ಇವುಗಳನ್ನು ಇಲ್ಲಿ ವಿವರಿಸ ಲಾಗಿದೆ. ಎರಡನೆಯ ಭಾಗದಲ್ಲಿ ಕಾವ್ಯಾನಂದರ ಕಾವ್ಯ ಸಮೀಕ್ಷೆಯನ್ನು ಮಾಡಲಾಗಿದೆ.
ಒಬ್ಬ ಉನ್ನತ ಅಧಿಕಾರಿಯಾಗಿ ಸಿದ್ದಯ್ಯ ಪುರಾಣಿಕರು ಜನರಿಂದ ಅಂತರ ಕಾಪಾಡಿ ಕೊಂಡು ಬದುಕಲಿಲ್ಲ. ಜನಸಾಮಾನ್ಯರ ಕಷ್ಟ ಸುಖಗಳ ಜೊತೆಗೆ ಬೆರೆಯಲು ಆ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡಿ ರುವ ವಿವರಗಳನ್ನು ಈ ಕೃತಿಯಲ್ಲಿ ನೀಡಲಾ ಗಿದೆ. ಕವಿ ಮನಸ್ಸಿನ ಅಧಿಕಾರಿಯೊಬ್ಬ ಮಾಡಬಹುದಾದ, ಏರಬಹುದಾದ ಎತ್ತರವನ್ನು ಇದು ತಿಳಿಸುತ್ತದೆ. ಸರಕಾರಿ ಸೇವೆಯಿಂದ ನಿವೃತ್ತಿಯಾದರೂ ಸಾರ್ವಜನಿಕ ಸೇವೆಯಿಂದ ಡಾ. ಪುರಾಣಿಕರು ನಿವೃತ್ತಿಯಾಗಲಿಲ್ಲ. ಪ್ರವೃತ್ತಿ ಮಾರ್ಗ ಹಿಡಿದರು. ಬಸವ ಸಮಿತಿಯ ಸಂಶೋಧನಾ ಪ್ರಕಟನಾ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಬಸವ ಪಥ ಮತ್ತು ಬಸವ ಜರ್ನಲ್‌ಗಳ ಪ್ರಧಾನ ಸಂಪಾದಕರಾಗಿ ಒಂಬತ್ತು ವರ್ಷಗಳ ಕಾಲ ದುಡಿದರು ಎಂದು ಕೃತಿ ಹೇಳುತ್ತದೆ. ಸಿದ್ದಯ್ಯ ಪುರಾಣಿಕರ ಕಾವ್ಯವನ್ನು ವಿಶ್ಲೇಷಿಸುತ್ತಾ ಎಷ್ಟು ಹೇಳಿದರೂ ಮುಗಿಯದು ಎನ್ನುವುದಕ್ಕೆ ಕಾವ್ಯಾನಂದರ ಸಾಲುಗಳನ್ನೇ ಉದಾಹರಣೆಯಾಗಿ ನೀಡುತ್ತಾರೆ
‘‘ಅನ್ನಬಹುದೇನಯ್ಯ ಹಾಡು ಮುಗಿಯಿತ್ತೆಂದು
ಜನ್ನದಾಕಾಶದಲ್ಲದರ ಬೇರು
ಕನ್ನಡಿಯೊಳೆಷ್ಟು ಹಿಡಿಸೀತು ಕನಕಾಚಲವು
ಕೊಡಕೆ ಹಿಡಿಸೀತೆಷ್ಟು ಕಡಲ ನೀರು....’’
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 100. ಮುಖಬೆಲೆ 100 ರೂಪಾಯಿ.
-ಕಾರುಣ್ಯಾ

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News